ಸಾರಾಂಶ
ಹೂವಿನಹಡಗಲಿ: ಶಿಕ್ಷಕರಿಗೆ ಸದೃಢ ಸಮಾಜ, ಉತ್ತಮ ನಾಗರಿಕರನ್ನು ನಿರ್ಮಿಸುವ ಶಕ್ತಿ ಇದೆ ಎಂದು ಜಿಪಿಜಿ ಕಾಲೇಜು ಪ್ರಾಚಾರ್ಯ ಕೋರಿ ಹಾಲೇಶ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ 27ನೇ ವರ್ಷದ ಡಾ.ರಾಧಾಕೃಷ್ಣನ್ ಸ್ಮರಣಾರ್ಥ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸುವ ಪರಂಪರೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಮಾಡಲಾಗುತ್ತಿದೆ. ಸತತ 27 ವರ್ಷ ನಿರಂತರವಾಗಿ ಉತ್ತಮ ಶಿಕ್ಷಕರನ್ನು ಗೌರವಿಸುವ ಬಳಗದ ಕಾರ್ಯ ವೈಖರಿ ಶ್ಲಾಘನೀಯ ಎಂದರು.
ಬಾಲ್ಯದಲ್ಲಿ ಕಡು ಕಷ್ಟದಲ್ಲಿ ಅಭ್ಯಾಸ ಮಾಡಿ, ಸಾಧನೆ ಮೆರೆದ ವಿಜ್ಞಾನಿಗಳ, ಚಿಂತಕರ ಯಶೋಗಾಥೆ ನಮಗೆ ಸ್ಪೂರ್ತಿ ಎಂದ ಅವರು, ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಸದಾ ಶ್ರಮಿಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳ ಉನ್ನತ ಸಾಧನೆಗೆ ಪ್ರೇರೇಪಿಸುವ ಕೆಲಸ ನಿರಂತರವಾಗಿ ಆಗಬೇಕಿದೆ ಎಂದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ, ಶಿಕ್ಷಕರನ್ನು ಗೌರವಿಸಿದರೆ ಸಮಾಜವನ್ನು ಗೌರವಿಸಿದಂತೆ, ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ. ಬಳಗದ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.
27ನೇ ವರ್ಷದ ಡಾ .ರಾಧಾಕೃಷ್ಣನ್ ಸ್ಮರಣಾರ್ಥ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಎಂ.ಸರೋಜಮ್ಮ (ಪ್ರಾಥಮಿಕ), ಎಂ.ಸಣ್ಣಲಕ್ಕಪ್ಪ (ಪ್ರೌಢ), ನಟರಾಜ್ ಪಾಟೀಲ್ (ಕಾಲೇಜು), ಕೆ.ಬಿ.ಬಸವರಾಜ (ಗ್ರಂಥಾಲಯ) ಅವರನ್ನು ಗೌರವಿಸಲಾಯಿತು.ದೈಹಿಕ ಪರಿವೀಕ್ಷಕ ರಫಿ ಅಹಮದ್ ಖವಾಸ್, ಶಾಖಾ ಗ್ರಂಥಾಲಯಾಧಿಕಾರಿ ಬಿ.ನಾರಾಯಣ್ ದಾಸ್, ಬೀರಬ್ಬಿ ಬಸವರಾಜ, ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕುರಿ, ನಿವೃತ್ತ ಉಪ ಪ್ರಾಂಶುಪಾಲ ಪಿ.ಪ್ರಕಾಶ್ ಇತರರಿದ್ದರು.
ಬಳಗದ ಅಧ್ಯಕ್ಷ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿಗೆ ಭಾಜನರಾದವರು ತಮ್ಮ ವೃತ್ತಿ ಜೀವನದ ಅನುಭವ ಹಂಚಿಕೊಂಡರು.ಚಿತ್ತಾರ ನೃತ್ಯ ಶಾಲೆಯ ಮಕ್ಕಳು ನೃತ್ಯ ಪ್ರದರ್ಶಿಸಿದರು. ಚಂದನ ಕಲಾ ಸಂಸ್ಥೆಯ ಎಂ.ಪಿ.ಎಂ. ಪ್ರಶಾಂತ್, ನಾಗೇಶ್ ಕನ್ನಡ ಗೀತೆ ಪ್ರಸ್ತುತ ಪಡಿಸಿದರು. ಎಂ.ದಯಾನಂದ, ಶಂಕರ್ ಬೆಟಗೇರಿ, ವಿಶ್ವನಾಥ್ ಚಿಂಚಿ, ಕೆ.ದೊಡ್ಡಬಸಪ್ಪ, ನಾಗರಾಜ್ ಮಲ್ಕಿಒಡೆಯರ್ ನಿರ್ವಹಿಸಿದರು.