ಹರಪನಹಳ್ಳಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಚುನಾವಣೆ ಶುಕ್ರವಾರ ನಗರದಲ್ಲಿ ಭಾರಿ ಬಿಗಿ ಭದ್ರತೆಯಲ್ಲಿ ಬಿರುಸಿನಿಂದ ನಡೆಯಿತು.

ನಗರದ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲಿ ನಡೆದ ಚುನಾವಣೆಯಲ್ಲಿ ಮೂರು ಮತಗಟ್ಟೆಗಳನ್ನು ತೆರೆಯಲಾಗಿತ್ತು, ಬೆಳಗ್ಗೆ 8.30ಕ್ಕೆ ಆರಂಭವಾದ ಮತದಾನ ಸಂಜೆ 4.30ವರೆಗೆ ನಡೆಯಿತು. ಸರತಿ ಸಾಲಿನಲ್ಲಿ ಬಂದು ಶಿಕ್ಷಕರು ಮತ ಚಲಾಯಿಸಿದರು. 1078 ಮತದಾರರ ಪೈಕಿ 741 ಮತದಾರರು ಹಕ್ಕು ಚಲಾಯಿಸಿದರು.

22 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 44 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ೨22 ಅಭ್ಯರ್ಥಿಗಳು ಮತ್ತು ಗುರು ಬಳಗ ವಿಚಾರ ವೇದಿಕೆಯಿಂದ 22 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

ಚುನಾವಣೆ ಆರಂಭಕ್ಕೂ ಮುನ್ನ ಗುರು ಬಳಗದವರು ಶಿಕ್ಷಕ ಸಂಘದ ಚುನಾವಣೆಗೆ ನ್ಯಾಯಾಲಯ ತಡೆ ನೀಡಿದೆ ಎನ್ನಲಾದ ಆದೇಶ ಪ್ರತಿಯನ್ನು ಚುನಾವಣಾಧಿಕಾರಿಗೆ ನೀಡಿದಾಗ ಆಗ ಚುನಾವಣಾಧಿಕಾರಿ ನಮಗೆ ನ್ಯಾಯಾಲಯದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಈ ಆದೇಶ ಪ್ರತಿಯಲ್ಲಿ ನ್ಯಾಯಾಧೀಶರ ಸಹಿ ಇಲ್ಲ ಎಂದು ಚುನಾವಣಾ ಪ್ರಕ್ರಿಯೆ ಆರಂಭಿಸಿದರು.

ಡಿವೈಎಸ್ಪಿ ಸಂತೋಷ ಚವ್ಹಾಣ್ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‌ಐ ಶಂಭುಲಿಂಗ ಸಿ.ಹಿರೇಮಠ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ಇಲ್ಲಿ ಸಹ ಜರುಗಿದೆ. ಚುನಾವಣೆಗೆ ಸಂಬಂಧಪಟ್ಟಂತೆ ನಮಗೆ ನ್ಯಾಯಾಲಯದಿಂದ ಯಾವುದೇ ಅದಿಕೃತ ಆದೇಶ ಬಾರದ ಹಿನ್ನೆಲೆಯಲ್ಲಿ ನಾವು ಚುನಾವಣೆ ನಡೆಸಿದ್ದೇವೆ ಎನ್ನುತ್ತಾರೆ ಚುನಾವಣಾಧಿಕಾರಿ ಸಿದ್ದಲಿಂಗನಗೌಡ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಶಿಕ್ಷಕರ ಸಂಘದ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಪ್ರಗತಿಪರ ಶಿಕ್ಷಕರ ವೇದಿಕೆಯ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಶಿಕ್ಷಕರ ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುವುದು ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಪ್ರಭು.