ರಾಜಕೀಯ ಪಕ್ಷಗಳ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ಶಿಕ್ಷಕರು!

| Published : Jan 19 2024, 01:51 AM IST

ಸಾರಾಂಶ

ರಾಮನಗರ: ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ನಿಗದಿಯಾಗಿರುವುದರಿಂದ ಪಠ್ಯ ಬೋಧನ ಕಾರ್ಯ ಒತ್ತಡದ ನಡುವೆಯೂ ಬಹುತೇಕ ಶಿಕ್ಷಕರು ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಪರ ಬಹಿರಂಗವಾಗಿಯೇ ಪ್ರಚಾರಕ್ಕೆ ದುಮಿಕಿದ್ದಾರೆ.

ರಾಮನಗರ: ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ನಿಗದಿಯಾಗಿರುವುದರಿಂದ ಪಠ್ಯ ಬೋಧನ ಕಾರ್ಯ ಒತ್ತಡದ ನಡುವೆಯೂ ಬಹುತೇಕ ಶಿಕ್ಷಕರು ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಪರ ಬಹಿರಂಗವಾಗಿಯೇ ಪ್ರಚಾರಕ್ಕೆ ದುಮಿಕಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ (ಫೆ.16)ಉಪ ಚುನಾವಣೆ ಮುಹೂರ್ತ ನಿಗದಿ ಪಡಿಸುತ್ತಿದ್ದಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗಿಂತ ಹೆಚ್ಚಾಗಿ ಮತದಾನದ ಹಕ್ಕು ಹೊಂದಿರುವ ಶಿಕ್ಷಕರೇ ಚುನಾವಣೆಗೆ ಮೈಕೊಡವಿ ನಿಂತಿದ್ದಾರೆ.

ಮತದಾರ ಶಿಕ್ಷಕರಿಗೆಯೇ ಪ್ರತಿಷ್ಠೆ:

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿರುವ ಪುಟ್ಟಣ್ಣ ಕಾಂಗ್ರೆಸ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಾತ್ರಿಯಾಗಿದೆ.

ಈ ಚುನಾವಣೆಯನ್ನು ರಾಜಕೀಯ ಪಕ್ಷಗಳ ಅಭ್ಯರ್ಥಿ ಹಾಗೂ ಕಾರ್ಯಕರ್ತರಿಗಿಂತ ಹೆಚ್ಚಾಗಿ ಶಿಕ್ಷಕರಿಗೆ ಪ್ರತಿಷ್ಠೆಯಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ತಮ್ಮನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಪದವಿ ಪರೀಕ್ಷೆ ಫೆ.6 - ಮಾ. 2ರವರೆಗೆ, ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾರ್ಚ್ ಕೊನೆಯ ವಾರದಿಂದ ಆರಂಭಗೊಳ್ಳಲಿದೆ. ಈ ಪರೀಕ್ಷಾ ಒತ್ತಡದ ನಡುವೆಯೂ ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ನಿಭಾಯಿಸುವಂತಾಗಿದೆ.

ಈಗಾಗಲೇ ಶಿಕ್ಷಕರು ಗುಂಪು ಕಟ್ಟಿಕೊಂಡು ತಮ್ಮ ನೆಚ್ಚಿನ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿ ಪರವಾಗಿ ರಾಜಕಾರಣಿಗಳೂ ನಾಚುವಂತೆ ಪ್ರಚಾರ ನಡೆಸುತ್ತಿದ್ದು, ಕೆಲ ಶಿಕ್ಷಕರು ತರಗತಿಗಳಿಗೆ ಬಂಕ್ ಹೊಡೆದು ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಅಭ್ಯರ್ಥಿಯನ್ನು ಮತದಾರರ ಬಳಿ ಕರೆದೊಯ್ಯುವ, ಸಭೆ ಸಮಾರಂಭಗಳನ್ನು ಆಯೋಜಿಸುವುದು ಮಾತ್ರವಲ್ಲದೆ ಮತದಾರರನ್ನು ತಮ್ಮತ್ತ ಸೆಳೆಯಲು ಬೇಕಾದ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿದ್ದಾರೆ.

ಅಡ್ಡಿಯಾಗದ ನೀತಿ ಸಂಹಿತೆ:

ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಮನಗರ ಜಿಲ್ಲೆ ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬರಲಿವೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಜ....ರಿಂದ ಫೆ....ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.

ಆದರೆ, ಅಭ್ಯರ್ಥಿಗಳ ಪರವಾಗಿ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಕಾಲೇಜುಗಳ ಉಪನ್ಯಾಸಕರು ಬಹಿರಂಗವಾಗಿಯೇ ಚುನಾವಣಾ ಕಣದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಇವರ್ಯಾರಿಗೂ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿಲ್ಲ.

ಮತದಾರ ಶಿಕ್ಷಕರಿಗೆ ದುಬಾರಿ ಬೆಲೆಯ ಉಡುಗೊರೆ, ಬೇರೆಡೆ ನೆಲೆಸಿರುವ ಶಿಕ್ಷಕರನ್ನು ಹುಡುಕುವ ಕಾರ್ಯ, ಅವರಿಂದ ರಿಜಿಸ್ಟರ್ ಮಾಡಿಸುವ ಹೊಣೆಯನ್ನು ಅಭ್ಯರ್ಥಿಗಳ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಶಿಕ್ಷಕರೇ ಹೊತ್ತಿಕೊಂಡಿದ್ದಾರೆ.

ಅಭ್ಯರ್ಥಿಗಳು ನಾಲ್ಕೈದು ತಿಂಗಳಿನಿಂದಲೇ ಮತದಾರರನ್ನು ಓಲೈಸುವ ಕಾರ್ಯ ಪ್ರಾರಂಭಿಸಿದ್ದರು. ಆದರೀಗ ಅದು ಬಿರುಸಿನಿಂದ ನಡೆಯುತ್ತಿದೆ. ಜಿಲ್ಲೆಯ 5 ತಾಲೂಕುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಮತ್ತು ಜೆಡಿಎಸ್ - ಬಿಜೆಪಿ ಮೈತ್ರಿ ಆಕಾಂಕ್ಷಿತ ಅಭ್ಯರ್ಥಿ ಎ.ಪಿ.ರಂಗನಾಥ ಪ್ರಚಾರ ನಡೆಸಿದ್ದಾರೆ. ಇದಕ್ಕೆ ಶಿಕ್ಷಕರು ಬಹಿರಂಗವಾಗಿಯೇ ಸಾಥ್ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕೋಟ್ ............

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯೂ ರಾಜಕೀಯ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಪಕ್ಷದ ಬೆಂಬಲ ಮಾತ್ರ ಅಭ್ಯರ್ಥಿಗೆ ಇರುತ್ತದೆ. ಇದು ಶಿಕ್ಷಕರಿಗಾಗಿಯೇ ಮೀಸಲಾಗಿರುವ ಕ್ಷೇತ್ರ. ಹಾಗಾಗಿ ಈ ಚುನಾವಣೆಯಲ್ಲಿ ಅಭ್ಯರ್ಥಿ ಪರವಾಗಿ ಶಿಕ್ಷಕರೇ ಪ್ರಚಾರ ನಡೆಸುವುದು ಅನಿವಾರ್ಯವಾಗಿದೆ.

- ಸತೀಶ್, ಜಿಲ್ಲಾಧ್ಯಕ್ಷರು, ಸರ್ಕಾರಿ ನೌಕರರ ಸಂಘ, ರಾಮನಗರ.

18ಕೆಆರ್ ಎಂಎನ್ 1,2.ಜೆಪಿಜಿ

1.ಪುಟ್ಟಣ್ಣ

2.ಎ.ಪಿ.ರಂಗನಾಥ