ಮಕ್ಕಳಿಗೆ ಭವಿಷ್ಯ ರೂಪಿಸಲು ಶಿಕ್ಷಕರಿಂದ ಸಾಧ್ಯ: ಸರಿತಾ

| Published : Mar 25 2025, 12:50 AM IST

ಸಾರಾಂಶ

ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರು ಮತ್ತು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಭಾರತೀ ಕಾಲೇಜಿನ ಉಪನ್ಯಾಸಕಿ ಸರಿತಾ ಕಿವಿಮಾತು ಹೇಳಿದರು.

ಕೆ.ಎಂ.ದೊಡ್ಡಿ: ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರು ಮತ್ತು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಭಾರತೀ ಕಾಲೇಜಿನ ಉಪನ್ಯಾಸಕಿ ಸರಿತಾ ಕಿವಿಮಾತು ಹೇಳಿದರು.

ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಮಾಂಟೆಸ್ಸರಿ ಮಕ್ಕಳಿಗೆ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿಯನ್ನು ಸಂಪಾದಿಸುವ ಬದಲು ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನೇ ಆಸ್ತಿಯನ್ನಾಗಿ ಪರಿವರ್ತಿಸಿ ಶಿಕ್ಷಣದ ಮಹತ್ವವನ್ನು ತಿಳಿಸಿ ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸಂಸ್ಥೆ ತೆರೆದು ಗುಣಮಟ್ಟದ ಶಿಕ್ಷಣ ನೀಡಿದರೆ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗುತ್ತದೆ. ಬಡವರ ಆಸ್ತಿ ಶಿಕ್ಷಣವಾಗಿದೆ. ಶಿಕ್ಷಣ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತದೆ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ರವಿ ಸಾವಂದಿಪುರ ಮಾತನಾಡಿ, ಗುರು- ಹಿರಿಯರಿಗೆ ಸಿಗಬೇಕಾದ ಗೌರವಗಳು ಕಡಿಮೆಯಾಗುತ್ತಿವೆ. ಹಳ್ಳಿಗಳಲ್ಲಿ ಸಂಬಂಧಗಳ ಕೊಂಡಿ ಕಳಚಿ ಹುಚ್ಚರ ಸಂತೆಯಾಗುತ್ತಿದೆ. ವಾಸ ಮಾಡುವುದಂಥ ಕಷ್ಟಕರ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ವಿಷಾದಿಸಿದರು.

ವಿದ್ಯಾಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕು. ಪೋಷಕರು ತಿಳಿವಳಿಕೆ ಮೂಡಿಸಿದರೆ ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕರಿಯಾಗುತ್ತದೆ ಎಂದರು.

ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಸ್ಥೆ ಕಾರ್ಯದರ್ಶಿ ಸೌಮ್ಯ ಕೃಷ್ಣ, ನಿರ್ದೇಶಕರಾದ ಹಾಗಲಹಳ್ಳಿ ಬಸವರಾಜು, ಎ. ವಿಜೇಂದ್ರ, ಶಿಕ್ಷಕರಾದ ಎಸ್.ಬಿ. ಅಶ್ವಿನಿ, ಪಿ.ಸವಿತಾ, ಡಿ.ಎಂ.ಸ್ಮಿತಾ, ಆರ್.ರಮ್ಯ, ಕೆ.ಎನ್. ಪ್ರಿಯಾಂಕ, ಕೆ.ಎನ್. ಅನುಪಮ, ಸುಸ್ಮಿತಾ, ರಚನಾ, ನವ್ಯ, ಶ್ವೇತಾ, ಡಿ.ಎನ್. ಆಶಾ ಸೇರಿದಂತೆ ಮತ್ತಿತರಿದ್ದರು.