ಪುತ್ತೂರು: ವಿವಿಧ ಭಾಷೆ, ಸಂಸ್ಕೃತಿ, ಸಾಮಾಜಿಕ ಹಿನ್ನೆಲೆ ಹಾಗೂ ಜೀವನಾನುಭವಗಳನ್ನು ಹೊಂದಿರುವ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಯಾಗಿ ಮೂಡಿಬರುವಂತೆ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ. ಪರಸ್ಪರ ಗೌರವ, ಸಹಿಷ್ಣುತೆ ಹಾಗೂ ಸಮಾವೇಶಾತ್ಮಕ ಶಿಕ್ಷಣದ ಮೌಲ್ಯಗಳನ್ನು ಬೆಳೆಸಿದಾಗ ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿ ಹೊಂದುತ್ತಾರೆ ಎಂದು ಸಂಪನ್ಮೂಲ ವ್ಯಕ್ತಿ ಪ್ರೀತಿ ಶೆಣೈ ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು. ತರಬೇತಿಯಲ್ಲಿ ಶಿಕ್ಷಕರಿಗೆ ಒತ್ತಡ ನಿರ್ವಹಣೆ, ತರಗತಿ ನಿರ್ವಹಣೆ, ತರಗತಿಯ ಸಾಮರ್ಥ್ಯ ವಿಕಸನ ಕಾರ್ಯತಂತ್ರಗಳು ಹಾಗೂ ಭಾರತೀಯ ಶಾಲೆಗಳ ಸಾಂಸ್ಕೃತಿಕ ವಾಸ್ತವತೆಗಳು ಮೊದಲಾದ ವಿಚಾರಗಳ ಕುರಿತು ತರಬೇತಿ ಪಡೆಯುತ್ತಿರುವುದರಿಂದ ಪರಿಣಾಮಕಾರಿ ಬೋಧನಾ ವಿಧಾನ ಅಳವಡಿಸಿಕೊಳ್ಳಬಹುದು ಎಂದರು.ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಪ್ರಾಂಶುಪಾಲರಾದ ಮಾಲತಿ ಡಿ., ಉಪಪ್ರಾಂಶುಪಾಲ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.ವಿದ್ಯಾಲಯದ ಶಿಕ್ಷಕಿ ಶರಣ್ಯ ಪ್ರಾರ್ಥಿಸಿದರು. ಕೃತ್ತಿಕಾ ಸ್ವಾಗತಿಸಿದರು. ದೀಪ್ತಿ ವಂದಿಸಿ, ಸ್ವಾತಿ ನಿರೂಪಿಸಿದರು.