ಹಸಿರು ದೀಪಾವಳಿ ಜಾಗೃತಿಗೆ ಶಿಕ್ಷಕರ ಕೊಡುಗೆ ಅಗತ್ಯ: ರಂಗಧಾಮಪ್ಪ

| Published : Oct 30 2024, 12:44 AM IST

ಹಸಿರು ದೀಪಾವಳಿ ಜಾಗೃತಿಗೆ ಶಿಕ್ಷಕರ ಕೊಡುಗೆ ಅಗತ್ಯ: ರಂಗಧಾಮಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಇಕೋ ಕ್ಲಬ್, ಎನ್.ಎಸ್.ಎಸ್. ಸಹಯೋಗದೊಂದಿಗೆ ‘ನಮ್ಮ ನಡೆ ಹಸಿರೆಡೆಗೆ: ಗೋ ಗ್ರೀನ್ ಅಭಿಯಾನ: 2024’ ರಡಿ ‘ಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ-2024 ರತ್ತ ನಮ್ಮ ಹೆಜ್ಜೆ’ ಪರಿಸರ ಜಾಗೃತಿ ಅಭಿಯಾನ ನಡೆಯಿತು. ಹಸಿರು ದೀಪಾವಳಿ ಆಚರಣೆ ಕುರಿತ ಮಾಹಿತಿ ಕರಪತ್ರ ಬಿಡುಗಡೆಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಇಕೋ ಕ್ಲಬ್, ಎನ್.ಎಸ್.ಎಸ್. ಸಹಯೋಗದೊಂದಿಗೆ ಆಯೋಜಿಸಲಾದ ‘ನಮ್ಮ ನಡೆ ಹಸಿರೆಡೆಗೆ: ಗೋ ಗ್ರೀನ್ ಅಭಿಯಾನ: 2024’ ರಡಿ ‘ಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ-2024 ರತ್ತ ನಮ್ಮ ಹೆಜ್ಜೆ’ ಪರಿಸರ ಜಾಗೃತಿ ಅಭಿಯಾನ ನಡೆಯಿತು. ಈ ಸಂದರ್ಭ ಹಸಿರು ದೀಪಾವಳಿ ಆಚರಣೆ ಕುರಿತ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೊಡಗಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಾರ್ಥನಾ ಸಭೆಯ ವೇಳೆ ಮಾಲಿನ್ಯಕಾರಕ ಪಟಾಕಿ ಸಿಡಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಾಲೆಗಳಲ್ಲಿ ಇಕೋಕ್ಲಬ್, ಎನ್.ಎಸ್.ಎಸ್., ಎನ್.ಸಿ.ಸಿ. ಘಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ಬಿಟ್ಟು ಹಸಿರು ಪಟಾಕಿ ಮಾತ್ರ ಬಳಸಲು ತಿಳಿಸಲಾಗಿದೆ ಎಂದರು.

ಹಣತೆ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಸರ್ಕಾರ ಆದೇಶಿಸಿದೆ. ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಗ್ಗಿಸಿ ಪಟಾಕಿ ಸಿಡಿತದಿಂದ ಸಂಭವಿಸುವ ಅವಘಡಗಳನ್ನು ತಡೆಗಟ್ಟುವ ದಿಸೆಯಲ್ಲಿ ನಾವೆಲ್ಲರೂ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಗೆ ವಿಶೇಷ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಹಸಿರು ದೀಪಾವಳಿ ಆಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪರಿಸರ ಜಾಗೃತಿ ಅಭಿಯಾನ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, 125 ಡೆಸಿಬಲ್ ಗಿಂತ ಕಡಿಮೆ ಶಬ್ದ ಉಂಟು ಮಾಡುವ ಪಟಾಕಿಗಳನ್ನು ಮಾತ್ರ ಸಿಡಿಸಲು ಸರ್ಕಾರ ಅನುಮತಿ ನೀಡಿದೆ ಎಂದರು.

ಕೊಡಗಿನಲ್ಲಿ ಕಳೆದ 14 ವರ್ಷಗಳಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಮಹತ್ವದ ಕುರಿತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹಸಿರು ದೀಪಾವಳಿ ಆಚರಣೆ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದ ಮಡಿಕೇರಿ ಬಿಇಒ ಬಿ.ಸಿ.ದೊಡ್ಡೇಗೌಡ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ಕೇವಲ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಸಿಡಿಸುವ ಮೂಲಕ ದೀಪಾವಳಿ ಆಚರಿಸಬೇಕು ಎಂದರು.

ಪ್ರೌಢಶಾಲಾ ವಿದ್ಯಾರ್ಥಿನಿ ಎಂ.ಎನ್.ರಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದಳು.ದೀಪಾವಳಿ ಸಂದರ್ಭ ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ಬಿಟ್ಟು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವುದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.

ಶಿಕ್ಷಣ ಇಲಾಖೆಯ ಡಿವೈಪಿಸಿ ಎಂ.ಕೃಷ್ಣಪ್ಪ, ಬಿಆರ್‌ಸಿ ಕೆ.ಪಿ.ಗುರುರಾಜ್, ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ, ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ತರಬೇತಿ ಆಯುಕ್ತ ಕೆ.ಯು.ರಂಜಿತ್, ಬುಲ್ ಬುಲ್ ವಿಭಾಗದ ಮುಖ್ಯಸ್ಥೆ ಡೈಸಿ, ಸರ್ಕಾರಿ ಪಿಯು ಕಾಲೇಜ್ ಪ್ರಾಂಶುಪಾಲ ಪಿ.ಆರ್.ವಿಜಯ್, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಕೆ.ವಿ.ಶಶಿಕಲಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎನ್.ಪಿ.ಕಾವೇರಿ, ಬಿಆರ್‌ಪಿ ಐ.ಜೆ.ಜನೆಟ್ ಮತ್ತಿತರರು ಪಾಲ್ಗೊಂಡಿದ್ದರು.

ಕೆ.ಯು.ರಂಜಿತ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಗೀತೆ ಹಾಡಿದರು.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಎನ್‌ಎಸ್‌ಎಸ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ಹಸಿರು ದೀಪಾವಳಿ ಆಚರಣೆ ಕುರಿತಂತೆ ವಿವಿಧ ಪರಿಸರ ಘೋಷಣೆಗಳನ್ನು ಕೂಗಿದರು.