ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ನಗರದ ಇಜಾರಿಲಕಮಾಪುರ ಕೇಂದ್ರದ ಸಿಬ್ಬಂದಿ ಕೆಲವು ಮಹಿಳಾ ಅಭ್ಯರ್ಥಿಗಳ ಬಳೆ, ಕಿವಿ ಓಲೆ ಹಾಗೂ ಕಾಲು ಚೈನು ತೆಗೆಸಿದ ಘಟನೆ ನಡೆದಿದೆ.
ಹಾವೇರಿ: ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ನಗರದ ಇಜಾರಿಲಕಮಾಪುರ ಕೇಂದ್ರದ ಸಿಬ್ಬಂದಿ ಕೆಲವು ಮಹಿಳಾ ಅಭ್ಯರ್ಥಿಗಳ ಬಳೆ, ಕಿವಿ ಓಲೆ ಹಾಗೂ ಕಾಲು ಚೈನು ತೆಗೆಸಿದ ಘಟನೆ ನಡೆದಿದೆ.ನಗರದ ಇಜಾರಿಲಕಮಾಪುರ ಪಿಯು ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಟಿಇಟಿ (ಪರೀಕ್ಷೆ)ಗೆ ಹಾಜರಾಗಲು ಬಂದಿದ್ದ ಮಹಿಳಾ ಅಭ್ಯರ್ಥಿಗಳ ಗಾಜಿನ ಬಳೆ, ಕಿವಿ ಓಲೆ, ಕಾಲು ಚೈನು ತೆಗೆದಿರಿಸಿ ಪರೀಕ್ಷಾ ಕೊಠಡಿಗೆ ಬರುವಂತೆ ಸಿಬ್ಬಂದಿ ಸೂಚನೆ ನೀಡಿದರು.
ಸಿಬ್ಬಂದಿ ಸೂಚನೆ ಹಿನ್ನೆಲೆಯಲ್ಲಿ ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಕೊಠಡಿ ಹೊರಗಡೆ ಕಾಲು ಚೈನ್, ಬಳೆ ಮತ್ತು ಕಿವಿ ಓಲೆ ತೆಗೆದು ಪರೀಕ್ಷೆ ಕೊಠಡಿಗೆ ತೆರಳಿದರು. ಕೆಲವು ಮಹಿಳೆಯರು ಪೋಷಕರನ್ನು ಹುಡುಕಿಕೊಂಡು ಹೋಗಿ ಕಿವಿ ಓಲೆ, ಕಾಲುಚೈನು ಕೊಟ್ಟು ಬಂದು ಪರೀಕ್ಷೆಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಿಸುವಂತಾಯಿತು. ಈ ರೀತಿಯ ನಿಯಮ ಇಲ್ಲದಿದ್ದರೂ ಬಳೆ, ಕಿವಿಯೋಲೆ ತೆಗೆಸಿದ್ದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಇದನ್ನು ಅಲ್ಲಗಳೆದಿರುವ ಡಿಡಿಪಿಐ ಮೋಹನ ದಂಡಿನ್, ನಮ್ಮ ಸಿಬ್ಬಂದಿಗೆ ನಿಯಮದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ರೀತಿಯ ಘಟನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾವೇರಿ ನಗರದಲ್ಲಿ 15 ಹಾಗೂ ರಾಣಿಬೆನ್ನೂರು ನಗರದಲ್ಲಿ 9 ಸೇರಿದಂತೆ ಒಟ್ಟು 24 ಕೇಂದ್ರಗಳಲ್ಲಿ ಪರೀಕ್ಷೆ ನಡೆದವು. ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 10,250 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 9806 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 444 ಅಭ್ಯರ್ಥಿಗಳು ಗೈರಾಗಿದ್ದಾರೆ.ಜಿಲ್ಲೆಯಲ್ಲಿ ನಡೆದ ಟಿಇಟಿ ಪರೀಕ್ಷಾ ಕೇಂದ್ರಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ಧಾರವಾಡದ ನಿರ್ದೇಶಕರಾದ ಈಶ್ವರ ನಾಯಕ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಪರೀಕ್ಷೆಗಳು ಶಾಂತ ರೀತಿಯಿಂದ ವ್ಯವಸ್ಥಿತವಾಗಿ ನಡೆದವು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.