ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಶಕ್ತಿ ಶಿಕ್ಷಕರಿಗಿದೆ: ಶಾಸಕ ಕೆ.ಎಂ. ಉದಯ್

| Published : Sep 06 2025, 01:00 AM IST

ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಶಕ್ತಿ ಶಿಕ್ಷಕರಿಗಿದೆ: ಶಾಸಕ ಕೆ.ಎಂ. ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಆಸ್ತಿಯಾಗಿರುವ ಶಿಕ್ಷಕರು ಯಾವುದೇ ವ್ಯಕ್ತಿ, ಪಕ್ಷ ಅಥವಾ ರಾಜಕೀಯ ವೇದಿಕೆಗೆ ಸೀಮಿತವಾಗಬಾರದು ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ವಿದ್ಯಾರ್ಥಿಗಳಲ್ಲಿ ಸೃಜನಶೀಲ, ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಿಗೊಳಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಶಾಸಕ ಕೆ.ಎಂ. ಉದಯ್ ಶುಕ್ರವಾರ ಹೇಳಿದರು.

ಪಟ್ಟಣದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆ ಮತ್ತು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಸಕ್ತ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿಕ್ಷಕರಿಗೆ ಅಭಿನಂದಿಸಿ ಮಾತನಾಡಿದರು.

ರಾಷ್ಟ್ರದ ಭವಿಷ್ಯ ನಿರ್ಧಾರವಾಗುವುದು ಕಲಿಕೆಯ ಮಂದಿರಗಳಲ್ಲಿ. ಶಿಕ್ಷಕರು ಸದಾ ಅಧ್ಯಯನಶೀಲರಾಗಿ ತಾಳ್ಮೆಯಿಂದ ಮಕ್ಕಳಿಗೆ ವಿಚಾರ ಪ್ರಜ್ಞೆ, ಸ್ವಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವ ಕೆಲಸ ಮಾಡಬೇಕು ಎಂದರು.

ಸಮಾಜದ ಬೆನ್ನೆಲುಬಾಗಿರುವ ಶಿಕ್ಷಕರಿಗೆ ಇಡೀ ರಾಷ್ಟ್ರವನ್ನು ಕಟ್ಟುವ ಶಕ್ತಿ ಇರುತ್ತದೆ. ಇಂತಹ ಶಿಕ್ಷಕರು ಮಕ್ಕಳಲ್ಲಿ ವಿದ್ಯೆಯೊಂದಿಗೆ ಬುದ್ಧಿಚಾತುರ್ಯದ ಆಧಾರದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ ಮಾಡುವ ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು. ಕಳೆದ 2022ರಲ್ಲಿ ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೆ, ಆದರೆ ಕೆಲ ಶಿಕ್ಷಕರು ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿರು.

ದೇಶದ ಆಸ್ತಿಯಾಗಿರುವ ಶಿಕ್ಷಕರು ಯಾವುದೇ ವ್ಯಕ್ತಿ, ಪಕ್ಷ ಅಥವಾ ರಾಜಕೀಯ ವೇದಿಕೆಗೆ ಸೀಮಿತವಾಗಬಾರದು ಎಂದು ಕಿವಿಮಾತು ಹೇಳಿದರು.

ಮೈಸೂರು ಕುವೆಂಪು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾ.ವಾಸು ಬೋರೇಗೌಡ ಪ್ರಧಾನ ಭಾಷಣ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವೀಶ್, ಪ್ರಧಾನ ಕಾರ್ಯದರ್ಶಿ ಸತೀಶ್, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗೀತಾ, ಜಿಲ್ಲಾ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಬಿ.ರಮೇಶ್, ಶಿಕ್ಷಕರ ಸಂಘಟನೆಗಳ ಬಿ.ಆರ್. ಪ್ರಸನ್ನ,ದೇವರಾಜು, ರವಿಚಂದ್ರ, ರವೀಂದ್ರ ಚೌಡೇಶ್ ಮತ್ತಿತರರು ಇದ್ದರು.