ಇದು ಆಧುನಿಕ ಮತ್ತು ತಂತ್ರಜ್ಞಾನ ಕಾಲಘಟ್ಟ. ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಎಐ, ತಂತ್ರಜ್ಞಾನಕ್ಕೆ ತಕ್ಕಂತೆ ಆಧುನಿಕ ಬದಲಾವಣೆಗೆ ಶಿಕ್ಷಕರು ಪರಿವರ್ತನೆಗೊಂಡು, ಒಗ್ಗಿಕೊಂಡು ವಿದ್ಯಾರ್ಥಿಗಳಿಗೆ ಕಲಿಸುವ ಜವಬ್ದಾರಿ ಎಲ್ಲ ಶಿಕ್ಷಕರಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಇದು ಆಧುನಿಕ ಮತ್ತು ತಂತ್ರಜ್ಞಾನ ಕಾಲಘಟ್ಟ. ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಎಐ, ತಂತ್ರಜ್ಞಾನಕ್ಕೆ ತಕ್ಕಂತೆ ಆಧುನಿಕ ಬದಲಾವಣೆಗೆ ಶಿಕ್ಷಕರು ಪರಿವರ್ತನೆಗೊಂಡು, ಒಗ್ಗಿಕೊಂಡು ವಿದ್ಯಾರ್ಥಿಗಳಿಗೆ ಕಲಿಸುವ ಜವಬ್ದಾರಿ ಎಲ್ಲ ಶಿಕ್ಷಕರಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ದಕ್ಷಿಣ ಕನ್ನಡ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಮಂಗಳೂರು ಉತ್ತರ ವಲಯ ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉತ್ತರ ವಲಯ ವತಿಯಿಂದ ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು ತನ್ನ ಮಕ್ಕಳಿಗೆ ಕಲಿಸಿ ಅವರನ್ನು ಉನ್ನತ ಸ್ಥಾನಕ್ಕೆ ಏರಿಸುವ ಕೆಲಸ ಮಾಡುತ್ತಿದ್ದಾರೆ. ಭಾರತದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಶಿಕ್ಷಕರು. ನಾನು ಈ ಸ್ಥಾನಕ್ಕೆ ಬರಲು ತನ್ನ ತಂದೆ-ತಾಯಿಗಳ ಜೊತೆ ಶಿಕ್ಷಕರ ಪಾತ್ರವೂ ಇದೆ ಎಂದರು.ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಶಿಕ್ಷಕರ ನೇಮಕ, ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಅತಿಥಿ ಶಿಕ್ಷಕರ ನೇಮಕ ಹಾಗೂ ಅತಿಥಿ ಶಿಕ್ಷಕರ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಹೆಚ್ಚಿನ ಶಿಕ್ಷಣ ಪಡೆದವರೇ ದೇಶಕ್ಕೆ ಸಮಸ್ಯೆ !ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯ ಇದೆ. ಇವತ್ತು ನಾವು ಯಾವ ಕಾಲಘಟ್ಟದಲ್ಲಿ ಇದ್ದೇವೆ ಎಂದರೆ, ಶಿಕ್ಷಣ ಪಡೆದವರೇ ದೇಶಕ್ಕೆ ಸಮಸ್ಯೆ ಆಗಿದ್ದಾರೆ ಹೊರತು, ಕಡಿಮೆ ಶಿಕ್ಷಣ ಕಲಿತವರದು ಸಮಸ್ಯೆ ಕಡಿಮೆ. ಹೆಚ್ಚಿನ ಭ್ರಷ್ಟಾಚಾರ, ಕೋಮುವಾದ, ಟೆರರಿಸಮ್ ಇವೆಲ್ಲವೂ ಹೆಚ್ಚಿನ ಶಿಕ್ಷಣ ಪಡೆದವರಿಂದಲೇ ಆಗುತ್ತಿದ್ದು, ಆದ್ದರಿಂದ ಹೆಚ್ಚಿನ ಶಿಕ್ಷಣ ಪಡೆದವರೇ ನಮಗೆ ಸಮಸ್ಯೆಯಾಗಿದ್ದಾರೆ. ಅದಕ್ಕಾಗಿ ಶಿಕ್ಷಣದ ಜೊತೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಕೆಲಸ ಆಗಬೇಕು ಎಂದು ಯು.ಟಿ.ಖಾದರ್ ಹೇಳಿದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ:ಸಮಾರಂಭದಲ್ಲಿ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಸೇರ್ಕಳ ಶಾಲೆಯ ದಾಮೋದರ, ಮುಂಡ್ರುಪಾಡಿ ಶಾಲೆಯ ಚಿತ್ರಪ್ರಭಾ, ಸ್ಯಾಂಡ್‌ಪೀಟ್ ಶಾಲೆಯ ಉಮಾಲಕ್ಷ್ಮೀ, ಬದ್ರಿಯಾನಗರ ಶಾಲೆಯ ಪ್ಲೇವಿ ಜೆಸಿಂತಾ ಮಿರಾಂದ, ಪೆಂಚಾರು ಶಾಲೆಯ ಶ್ರೀವಾಣಿ, ಹೊಸ್ತೋಟ ಶಾಲೆಯ ಮಾಲತಿ, ಪಾಂಡಿಗದ್ದೆ ಶಾಲೆಯ ಯಶೋಧರ ಕೆ., ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿಟ್ಲ ಪಿ.ಎಂ.ಶ್ರೀ ಶಾಲೆಯ ವಿದ್ಯಾಶಂಕರ್ ಡಿ., ಅಂಡೆತಡ್ಕ ಶಾಲೆಯ ಕೃಷ್ಣಪ್ಪ ಪೂಜಾರಿ, ಕಾಟಿಪಳ್ಳ ಇಂದಿರಾ ಎಸ್., ಉಚ್ಚಿಲಗುಡ್ಡೆ ಶಾಲೆಯ ಹರೀಶ್ ಕುಮಾರ್ ಬಿ.ಎಂ., ಪುಚ್ಚಮೊಗರು ಶಾಲೆಯ ಸುಕುಮಾರ್, ಸಾಮೆತ್ತಡ್ಕ ಶಾಲೆಯ ಮರಿಯಾ, ಎಣ್ಮೂರುಶಾಲೆಯ ಭುವನೇಶ್ವರಿ, ಪ್ರೌಢಶಾಲಾ ವಿಭಾಗದಲ್ಲಿ ಮಂಚಿಕೊಳ್ನಾಡು ಶಾಲೆಯ ವಿಜಯಲಕ್ಷ್ಮಿ, ವೇಣೂರು ಪ್ರೌಢಶಾಲೆಯ ರವೀಂದ್ರ ಕೆ., ಕೊಡಿಯಾಲ್‌ಬೈಲ್ ಸಂತ ಅಲೋಶಿಯಸ್ ಪ್ರೌಢಶಾಲೆಯ ಪ್ರವೀಣ್ ಕುಟಿನ್ಹೋ, ಮುಚ್ಚೂರು ಶಾಲೆಯ ಕಿಶೋರ್, ಮೂಡುಮಾರ್ನಾಡು ಶಾಲೆಯ ಜೋನ್ ರೋನಾಲ್ಡ್ ಡಿಸೋಜ, ನೆಲ್ಯಾಡಿ ಸಂತ ಜಾರ್ಜ್ ಶಾಲೆಯ ತೋಮಸ್ ಎಂ.ಐ., ಅರಂತೋಡು ಪ್ರೌಢಶಾಲೆಯ ಕಿಶೋರ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದರ್ಶನ್, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಮನಪಾ ಕಮಿಷನರ್ ರಾಹುಲ್ ರತ್ನಂ ಪಾಂಡೆ, ಎಸಿ ಮೀನಾಕ್ಷಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅರ್ಚಿತ್, ಪ್ರಮುಖರಾದ ಶಾಲೆಟ್ ಲವೀನಾ ಪಿಂಟೊ, ಮಮತಾ ಡಿಎಸ್ ಗಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.ಡಿಡಿಪಿಐ ಶಶಿಧರ ಜಿ.ಎಸ್. ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.