ಸಾರಾಂಶ
ಹಾಜರಾತಿ ಮಹತ್ವ ಶಿಕ್ಷಕರು ಸಹ ತಪ್ಪದೇ ಹಾಜರಾತಿಯನ್ನು ಪಾಲಿಸಬೇಕು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಾಲಕಾಲಕ್ಕೆ ಮಾಹಿತಿಗಳು ದಾಖಲೆಗಳಾಗಿವೆಯಾದರೂ ಕೆಲವೊಮ್ಮೆ ಅನ್ಯ ಕಾರ್ಯಗಳ ನಿಮಿತ್ತ ಕಾರ್ಯ ನಿಯೋಜಿಸಿದಾಗ ಅಲ್ಲಿನ ಹಾಜರಾತಿ ಆಧಾರದ ಮೇಲೆ ದಾಖಲೆ ಮಾಡುವ ಅಗತ್ಯವಿರುತ್ತದೆ. ಆದ್ದರಿಂದ ಶಿಕ್ಷಕರು ತಪ್ಪದೇ ಹಾಜರಾತಿಯನ್ನು ನಮೂದಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು.ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವಾ ಪುಸ್ತಕ ನಿರ್ವಹಣೆಯನ್ನು ಶಿಕ್ಷಕರೇ ನೋಡಿ ಪರಿಶೀಲಿಸಿಕೊಳ್ಳುವ ಅವಕಾಶ ನೀಡುವ ಗುರು ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಮ್ಮ ಕಚೇರಿಯ ಸಂಬಂಧಿಸಿದ ಎಲ್ಲ ಗುಮಾಸ್ತರನ್ನು ಇಲ್ಲಿ ಕರೆತರಲಾಗಿದೆ. ಸೇವಾ ಪುಸ್ತಕ ಸರ್ಕಾರಿ ನೌಕರನ ಸೇವಾ ಅವಧಿಯ ಜೀವಿತದಲ್ಲಿ ಬಹಳ ಮುಖ್ಯವಾದ ದಾಖಲೆಯಾಗಿರುವುದರಿಂದ ಸೇವಾ ಪುಸ್ತಕವನ್ನ ಬಹಳ ಜಾಗರೂಕತೆಯಿಂದ ನಿರ್ವಹಿಸಿಕೊಂಡು ಅವಲೋಕಿಸಬೇಕು ಎಂದು ಮನವಿ ಮಾಡಿದರು.ಕೊರೋನಾ ವೇಳೆ ಚೆಕ್‌ಪೋಸ್ಟ್, ಆಸ್ಪತ್ರೆ ಹಾಗೂ ಇತರೆಡೆಗಳಲ್ಲಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗಿತ್ತು. ಅಂತಹ ಶಿಕ್ಷಕರು ತಾವು ಅಲ್ಲಿ ಕರ್ತವ್ಯ ನಿರ್ವಹಿಸಿದ ದಿನಗಳ ಬಗ್ಗೆ ದಾಖಲಿಸದಿದ್ದಲ್ಲಿ ಸರಿಪಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆ ಇದ್ದರೂ ಪರಿಹರಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸದಾನಂದಮೂರ್ತಿ, ಸೇವಾ ಪುಸ್ತಕದಲ್ಲಿ ನಮ್ಮ ಶಿಕ್ಷಕರ ಅಗತ್ಯ ಮಾಹಿತಿಗಳು ಬಹುತೇಕ ದಾಖಲಾಗಿವೆ. ತಾಲೂಕಿನಾದ್ಯಂತ ಎಲ್ಲಾ ಶಿಕ್ಷಕರ ಸೇವಾ ಪುಸ್ತಕ ಸೇರ್ಪಡಿಸುವಿಕೆ ಬಹುತೇಕ ಮುಗದಿದೆ. ಈ ಒಂದು ಕಾರ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚಿನ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಹೇಳಿದರುಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಯೋಗೀಶ್, ಕ್ಷೇತ್ರ ಸಮನ್ವಯಾಧಿಕಾರಿ ಶಂಕರ್, ಇಸಿಒ ಗಿರೀಶ್, ಬಿಇಒ ಕಚೇರಿಯ ಅಧೀಕ್ಷಕರು ಹಾಗೂ ಸಿಬ್ಬಂದಿ ವರ್ಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಹಾಲಪ್ಪ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.