ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ದೇಶಾದ್ಯಂತ ಶಿಕ್ಷಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಖಿಇಖಿ ಕಡ್ಡಾಯ ನಿಯಮದ ವಿರುದ್ಧದ ಹೋರಾಟ ನವದೆಹಲಿಯ ಜಂತರ್-ಮಂತರ್‌ನಲ್ಲಿ ಜೋರಾಗಿದ್ದು, ಈ ಹೋರಾಟಕ್ಕೆ ಹಾಸನ ಜಿಲ್ಲೆಯ ಶಿಕ್ಷಕರ ಸಂಘದ ಪದಾಧಿಕಾರಿಗಳು ಗಣನೀಯ ಸಂಖ್ಯೆಯಲ್ಲಿ ಸೇರಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಸನ ಘಟಕವು ಇದಕ್ಕಾಗಿ ವಿಶೇಷವಾಗಿ ತಂಡಗಳನ್ನು ರಚಿಸಿ ನವದೆಹಲಿಗೆ ಪ್ರಯಾಣ ಬೆಳೆಸಿದೆ.ನವದೆಹಲಿಗೆ ಆಗಮಿಸಿದ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ಬೆಳಿಗ್ಗೆ ಕರ್ನಾಟಕ ಭವನದಲ್ಲಿ ಉಪಹಾರ ಸೇವಿಸಿ, ನಂತರ ಜಂತರ್-ಮಂತರ್ಗೆ ಧರಣಿ- ಸತ್ಯಾಗ್ರಹಕ್ಕೆ ತೆರಳುವ ತಯಾರಿಯಲ್ಲಿ ನಿರತರಾಗಿದ್ದರು. “ಟಿಇಟಿ ಬೇಡವೇ ಬೇಡ”, “ಶಿಕ್ಷಕರಿಗೆ ನ್ಯಾಯ ನೀಡಿ”, “ನೀತಿ ಸಮನ್ವಯತೆ ಬೇಕು” ಎಂಬ ಘೋಷಣೆಗಳೊಂದಿಗೆ ಹಾಸನದ ಶಿಕ್ಷಕರು ಹೋರಾಟದ ಸ್ಥಳಕ್ಕೆ ಸಾಗಿದರು. ಹಾಸನ ನಗರ ರೈಲು ನಿಲ್ದಾಣದಿಂದ ಮತ್ತೊಂದು ಶಿಕ್ಷಕರ ತಂಡವು ಭಾನುವಾರ ರಾತ್ರಿಯೇ ನವದೆಹಲಿಗೆ ಪ್ರಯಾಣ ಬೆಳೆಸಿತ್ತು. ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನೇತೃತ್ವದಲ್ಲಿ ನವೆಂಬರ್ ೨೪ ರಂದು ನಡೆಯುವ ರಾಷ್ಟ್ರಮಟ್ಟದ ಧರಣಿ, ಸತ್ಯಾಗ್ರಹದಲ್ಲಿ ಭಾಗವಹಿಸಲು ಈ ತಂಡ ಸಕಲ ತಯಾರಿಗಳನ್ನು ಮುಗಿಸಿತ್ತು. ಜಿಲ್ಲಾಧ್ಯಕ್ಷರಾದ ಚೈತ್ರ ನಾಯಕರಹಳ್ಳಿ, ಉಪಾಧ್ಯಕ್ಷ ಗುಡುಗನಹಳ್ಳಿ ಮಂಜುನಾಥ್, ಹಾಸನ ತಾಲೂಕು ಅಧ್ಯಕ್ಷ ಸಿ. ಎಚ್. ಅಣ್ಣೇಗೌಡ, ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ರಮೇಶ್, ಹರೀಶ್, ಪರಮೇಶ್, ಬೆಣಗಟ್ಟೆ ರೇವಣ್ಣ, ಚಂದ್ರಕಲಾ ಕೆ.ವಿ, ನಾಯಕರಹಳ್ಳಿ ಮಂಜೇಗೌಡ ಮತ್ತಿತರರು ಪ್ರಯಾಣ ಬೆಳೆಸಿದವರಲ್ಲಿ ಸೇರಿದ್ದಾರೆ.ಶಿಕ್ಷಕರ ಪ್ರಕಾರ ಈಗಿರುವ ಶಿಕ್ಷಣ ಕಾಯ್ದೆಯಲ್ಲಿ ಮತ್ತು ನೇಮಕಾತಿ ವಿಧಾನದಲ್ಲಿ ಟಿಇಟಿ ಕಡ್ಡಾಯಗೊಳಿಸುವುದು ಅನ್ಯಾಯಕರ ಹಾಗೂ ಶಿಕ್ಷಕರಿಗೆ ದ್ವಂದ್ವ ಪರೀಕ್ಷೆಯಂತೆ ಪರಿಣಮಿಸುತ್ತಿದೆ. ಈಗಾಗಲೇ ಉದ್ಯೋಗದಲ್ಲಿರುವ ಸಾವಿರಾರು ಪ್ರಾಥಮಿಕ ಶಿಕ್ಷಕರಿಗೆ ಹೊಸ ನಿಯಮ ಅನ್ವಯಿಸುವುದು ದೊಡ್ಡ ಅನಾನುಕೂಲವಾಗುವುದರಿಂದ, ಇದನ್ನು ಹಿಂಪಡೆಯಬೇಕು ಎಂಬ ಒತ್ತಾಯ ಜೋರಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಶಿಕ್ಷಕರು ಜಂತರ್-ಮಂತರ್‌ಗೆ ಆಗಮಿಸುತ್ತಿದ್ದು, ಹಾಸನ ಜಿಲ್ಲೆಯ ಶಿಕ್ಷಕರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. ರಾಜ್ಯದ ಶಿಕ್ಷಕರ ಸಂಘಗಳು ಪರಸ್ಪರ ಸಹಭಾಗಿತ್ವದಿಂದ ಹೋರಾಟ ಶಕ್ತಿ ಹೆಚ್ಚಿಸುತ್ತಿದ್ದು, ಕೇಂದ್ರ ಸರ್ಕಾರದಿಂದ ಬೇಡಿಕೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ದೊರೆಯುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಘದ ನಾಯಕರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಚೈತ್ರ ನಾಯಕರಹಳ್ಳಿ, ಉಪಾಧ್ಯಕ್ಷ ಗುಡುಗನಹಳ್ಳಿ ಮಂಜುನಾಥ್, ಸಿ.ಎಚ್. ಅಣ್ಣೇಗೌಡ, ರಮೇಶ್, ಲೋಹಿತ್ ಜವರಪ್ಪ, ಕಲ್ಲಹಳ್ಳಿ ಹರೀಶ್, ಕತ್ತಿಮಲ್ಲೇನಹಳ್ಳಿ ಪರಮೇಶ್, ನಾಯಕರಹಳ್ಳಿ ಮಂಜೇಗೌಡ ಸೇರಿದಂತೆ ಹಿರಿಯರು, ಯುವ ಶಿಕ್ಷಕರು, ಮಹಿಳಾ ಪದಾಧಿಕಾರಿಗಳೂ ಉಪಸ್ಥಿತರಿದ್ದರು.
;Resize=(128,128))