ಶಿಕ್ಷಕರು ತೋಳಿಗೆ ಕಪ್ಪು ಪಟ್ಟಿ ಧರಿಸಿಪಾಠಪ್ರವಚನ ಎಂದಿನಂತೆ ಮುಂದುವರಿಸಿದರು. ಕೆಲ ಸಮಯ ಹೊರಗೆ ನಿಂತು ತಮ್ಮ ಬೇಡಿಕೆಯನ್ನು ಮಾಧ್ಯಮದ ಮುಂದೆ ತೆರೆದಿಟ್ಟರು. ಇದೇ ವೇಳೆ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷೆ ಚೈತ್ರ ನಾಯಕರಹಳ್ಳಿ ಮಾಧ್ಯಮಗಳಿಗೆ ಮಾತನಾಡಿ, ಕಳೆದ ೨೫ರಿಂದ ೩೦ ವರ್ಷಗಳವರೆಗೆ ಸೇವೆ ಸಲ್ಲಿಸಿರುವ ಶಿಕ್ಷಕರಿಗೂ ಸಹ ಟಿ.ಇ.ಟಿ. ಪರೀಕ್ಷೆಯನ್ನು ಅನ್ವಯಿಸುವ ಆದೇಶ ಅನ್ಯಾಯಕಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಜಾರಿಗೊಳಿಸಲಾಗಿರುವ ಟೀಚರ್ ಎಲಿಜಿಬಿಲಿಟಿ ಟೆಸ್ಟ್ (ಟಿ.ಇ.ಟಿ.) ನಿಯಮಾವಳಿಗೆ ವಿರೋಧ ವ್ಯಕ್ತಪಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷೆ ಚೈತ್ರ ನಾಯಕರಹಳ್ಳಿ ನೇತೃತ್ವದಲ್ಲಿ ಶಾಂತಿಯುತವಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ನಗರದ ಸಂತೇಪೇಟೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಪಾಠಪ್ರವಚನ ಎಂದಿನಂತೆ ಮುಂದುವರಿಸಿದರು. ಕೆಲ ಸಮಯ ಹೊರಗೆ ನಿಂತು ತಮ್ಮ ಬೇಡಿಕೆಯನ್ನು ಮಾಧ್ಯಮದ ಮುಂದೆ ತೆರೆದಿಟ್ಟರು. ಇದೇ ವೇಳೆ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷೆ ಚೈತ್ರ ನಾಯಕರಹಳ್ಳಿ ಮಾಧ್ಯಮಗಳಿಗೆ ಮಾತನಾಡಿ, ಕಳೆದ ೨೫ರಿಂದ ೩೦ ವರ್ಷಗಳವರೆಗೆ ಸೇವೆ ಸಲ್ಲಿಸಿರುವ ಶಿಕ್ಷಕರಿಗೂ ಸಹ ಟಿ.ಇ.ಟಿ. ಪರೀಕ್ಷೆಯನ್ನು ಅನ್ವಯಿಸುವ ಆದೇಶ ಅನ್ಯಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸಂಘದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್, ಗೌರವಾಧ್ಯಕ್ಷರಾದ ನಾಗೇಶ್ ಹಾಗೂ ಕಾರ್ಯದರ್ಶಿ ಚೇತನ್ ಅವರ ಸೂಚನೆಯಂತೆ ರಾಜ್ಯದಾದ್ಯಂತ ಶಿಕ್ಷಕರು ಈ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದರು.

ಪಾಠ ಬೋಧನೆಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಶಾಲಾ ವೇಳೆಯಲ್ಲಿಯೇ ಕಪ್ಪುಪಟ್ಟಿ ಧರಿಸಿ ಸಂಕೇತಿಕವಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡಚಣೆ ಆಗದಂತೆ ಶಾಂತಿಯುತವಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈಗಾಗಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯದ ಎಲ್ಲಾ ಶಿಕ್ಷಕರು ಟಿ.ಇ.ಟಿ. ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಗುರುವಾರ ಎಲ್ಲಾ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದು, ೨೫ರಿಂದ ೪೦ ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರ ಸೇವೆಯನ್ನು ಪರಿಗಣಿಸಬೇಕು ಹಾಗೂ ಟಿಇಟಿ ನಿಯಮವನ್ನು ಹಿಂತೆಗೆದುಕೊಳ್ಳಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಬಿ.ಕೆ. ರವೀಂದ್ರ, ಶಿಕ್ಷಕರ ಸಂಘದ ಗುಡುಗನಹಳ್ಳಿ ಮಂಜುನಾಥಗೌಡ, ಲೋಹಿತ್ ಜವರಪ್ಪ, ಎಚ್. ಆರ್‌. ಶೇಖರ್‌, ಶಿಕ್ಷಕರಾದ ಅಂತೋಣಿಯಮ್ಮ ವೈಲೇಟ್, ಹರೀಶ್, ಶೈಲಜಾ, ವಿಜಯ ಎಂ., ಮಂಜುನಾಥ ಇತರರು ಉಪಸ್ಥಿತರಿದ್ದರು.