ಗಣತಿ ಸಿಬ್ಬಂದಿಗೆ ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ. ಕೆಲವು ಶಿಕ್ಷಕರಿಗೆ 200 ಮನೆಗಳು, ಕೆಲವರಿಗೆ 250 ಮನೆಗಳು, ಇನ್ನು ಕೆಲವರಿಗೆ 50ರಿಂದ 60 ಮನೆಗಳ ಹಂಚಿಕೆ ಮಾಡಿದ್ದು, ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ನೀಡಿಲ್ಲ. ಈ ತಾರತಮ್ಯ ಬಗೆಹರಿಸುವಂತೆ ಶಿಕ್ಷಕರು ಆಗ್ರಹಿಸಿದರು.
ಮುಳಗುಂದ: ಕರ್ನಾಟಕ ಸೇರಿದಂತೆ ದೇಶಾದ್ಯಂತ ಏ. 16ರಿಂದ ಮೊದಲ ಹಂತದ ಮನೆ ಪಟ್ಟಿ ಮತ್ತು ವಸತಿ ಗಣತಿ ಪ್ರಕ್ರಿಯ ಆರಂಭವಾಗಿದೆ. ಆದರೆ ಮುಳಗುಂದದಲ್ಲಿನ ಗಣತಿಗೆ ಬೇಕಾಗುವ ಕಿಟ್ ನೀಡದೆ ಇರುವುದಕ್ಕೆ ಶಿಕ್ಷಕರು ಪಪಂ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಪಪಂ ವ್ಯಾಪ್ತಿಯಲ್ಲಿ ಒಟ್ಟು 32 ಜನ ಗಣತಿ ಸಿಬ್ಬಂದಿ, 5 ಜನ ಕಾಯ್ದಿರಿಸಲ್ಪಟ್ಟ ಸಿಬ್ಬಂದಿ, ಗಣತಿದಾರರು 6 ಜನ ಸೂಪರ್‌ವೈಸರ್‌ಗಳು ಕಾರ್ಯ ನಿರ್ವಹಿಸಲು ನೇಮಕ ಮಾಡಿದ್ದು, ಮನೆ ಪಟ್ಟಿಗೆ ಬೇಕಾಗುವ ಚೆಕ್‌ಬಂದಿ ಮ್ಯಾಪ್, ಮಾರ್ಕರ್ ಪೆನ್ನು, ಕ್ಯಾಪ್, ಬ್ಯಾಗ್, ಮನೆಗೆ ನಂಬರ್ ಹಾಕದೇ ಕೇವಲ ಗೂಗಲ್ ಮ್ಯಾಪ್ ಹಾಕಿ ಚಾಕ್‌ಪೀಸ್ ನೀಡಿ ಗಣತಿ ಕಾರ್ಯ ಮಾಡಲು ಪಪಂ ಮುಖ್ಯಾಧಿಕಾರಿಗಳು ಕಿಟ್ ನೀಡದೆ ಆದೇಶ ಮಾಡಿದ್ದಾರೆ.ಅಲ್ಲದೇ ಗಣತಿ ಸಿಬ್ಬಂದಿಗೆ ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ. ಕೆಲವು ಶಿಕ್ಷಕರಿಗೆ 200 ಮನೆಗಳು, ಕೆಲವರಿಗೆ 250 ಮನೆಗಳು, ಇನ್ನು ಕೆಲವರಿಗೆ 50ರಿಂದ 60 ಮನೆಗಳ ಹಂಚಿಕೆ ಮಾಡಿದ್ದು, ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ನೀಡಿಲ್ಲ. ಈ ತಾರತಮ್ಯ ಬಗೆಹರಿಸುವಂತೆ ಆಗ್ರಹಿಸಿದರು.
ಮೇಲಧಿಕಾರಿಗಳು ಸಕಾಲಕ್ಕೆ ಕಿಟ್ ಹಾಗೂ ಮಾಹಿತಿ ಮತ್ತು ಸಿಬ್ಬಂದಿ ನೀಡದೇ ನಿರ್ಲಕ್ಷ್ಯ ತೋರುತ್ತಿದ್ದು, ಕೂಡಲೇ ಮೇಲಧಿಕಾರಿಗಳು ಇದರ ಬಗ್ಗೆ ಗಮನ ನೀಡಿ ತಕ್ಷಣವೇ ಪರಿಹಾರ ಮಾಡಬೇಕು. ಇಂತಹ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.11 ಕಿಟ್: ಪಪಂಗೆ ಒಟ್ಟು 11 ಕಿಟ್‌ಗಳು ಬಂದಿದ್ದು, ಅವುಗಳು ಮಾರ್ಕರ್ ಪೆನ್ನು ಹಾಗೂ ಕಾರ್ಡ್ ಸೀಟ್, ಪೇಪರ್, ಪೆನ್ ಸಿಸ್, ರಬ್ಬರ್, ಬ್ಯಾಗ್ ಒಳಗೊಂಡಿವೆ. ಅವುಗಳನ್ನು ಈಗಾಗಲೇ 6 ಸೂಪರ್‌ವೈಸರ್‌ಗೆ ಹಾಗೂ 5 ಗಣತಿದಾರರಿಗೆ ನೀಡಿದ್ದು, ಇನ್ನು ಉಳಿದ ಗಣತಿದಾರರ ಕಿಟ್ ಬೆಂಗಳೂರಿಗೆ, ಇಲ್ಲಿಗೆ ಬಂದ ತಕ್ಷಣ ಎಲ್ಲರಿಗೂ ವಿತರಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ತಿಳಿಸಿದರು.
ಒತ್ತಡ: ಏ. 16ರಿಂದ ಮನೆ ಪಟ್ಟಿ ಗಣತಿ ರಾಜ್ಯಾದ್ಯಾಂತ ಪ್ರಾರಂಭವಾಗಿದ್ದು, ಕಿಟ್‌ಗಳ ವಿತರಣೆಯಾಗಿಲ್ಲ. ಕಿಟ್‌ಗಳ ವಿತರಣೆ ಮಾಡದೇ ಗಣತಿ ಕಾರ್ಯ ಮಾಡುವುದಾದರೂ ಹೇಗೆ. ಕಿಟ್ ನೀಡಿದರೆ ನಮಗೂ ಗಣತಿ ಕಾರ್ಯಕ್ಕೆ ಅನುಕೂಲವಾಗುತ್ತದೆ. ಗಣತಿ ಕಾರ್ಯದಲ್ಲಿ ಒಂದು ದಿನ ವಿಳಂಬವಾದರೂ ಮೇಲಧಿಕಾರಿಗಳ ಕಿರುಕುಳ ತಾಳಲಾರದಂತೆ ಒತ್ತಡ ಹೇರುತ್ತಾರೆ. ಹೀಗೆ ಕಿಟ್ ವಿತರಣೆಯನ್ನು ತಡ ಮಾಡಿದರೆ ಹೇಗೆ ಕಾರ್ಯ ನಿರ್ವಹಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರು ತಿಳಿಸಿದರು.