ಕೊಪ್ಪಳ: ತಾಲೂಕಿನ ಹೊಸ ಬಂಡಿ ಹರ್ಲಾಪೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2007-08ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಹಾಗೂ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ಸುಂಕದ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗುರುಗಳಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದ ಅವರು, ತಾವು ಕಲಿತ ಸರ್ಕಾರಿ ಶಾಲೆಯನ್ನು ಹಳೆ ವಿದ್ಯಾರ್ಥಿಗಳು ತನುಮನ ಧನದಿಂದ ಬಲಪಡಿಸಬೇಕು, ತಮ್ಮ ವೃತ್ತಿ ಜೀವನದ ಬಗ್ಗೆ ಈಗಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಕುಕನೂರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಉಪನ್ಯಾಸಕ ಬಸವರಾಜ್ ಎಸ್ ಕವಳಿ ಮಾತನಾಡಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡು ಶಿಕ್ಷಕರು ತಮ್ಮ ಬದುಕಿನಲ್ಲಿ ನೀಡಿದ ಮಾರ್ಗದರ್ಶನ ಸ್ಮರಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗು ಹೆಚ್ಚಿಸಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಿಕ್ಷಣ ಪ್ರೇಮಿ ಕಾಸಯ್ಯಸ್ವಾಮಿ ಗವಿಮಠ ವಹಿಸಿದ್ದರು. ನೇಮರಾಜ್ ಹವಳೆ, ವೀರಣ್ಣ ವಾಲಿ, ಶರಣಪ್ಪ ಸುಂಕದ, ಮುಕ್ತಬಾಯಿ, ರಾಜಕುಮಾರ, ಭೀಮೇಶ, ಗುರುರಾಜ, ಸಾವಂತ, ಸುನೀತಾ,ಸುಧಾಕರ್ ಪಾಟೀಲ, ಭವ್ಯಾ, ಪ್ರಶಾಂತ ಸೇರಿದಂತೆ ಶಿಕ್ಷಕರು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.