ಮಕ್ಕಳನ್ನು ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಜೊತೆಗೆ ತಂದೆ ತಾಯಿ ನಂತರದ ಸ್ಥಾನದಲ್ಲಿ ಶಿಕ್ಷಕರನ್ನು ಗೌರವಿಸುವುದು ಗುರುವಿನ ವೃತ್ತಿಗೆ ಸಂದ ಗೌರವ ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಮಕ್ಕಳನ್ನು ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಜೊತೆಗೆ ತಂದೆ ತಾಯಿ ನಂತರದ ಸ್ಥಾನದಲ್ಲಿ ಶಿಕ್ಷಕರನ್ನು ಗೌರವಿಸುವುದು ಗುರುವಿನ ವೃತ್ತಿಗೆ ಸಂದ ಗೌರವ ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಹೇಳಿದರು.ನಗರದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಟಿ.ಎನ್. ಓಂಕಾರೇಶ್ವರ ರವರಿಗೆ ಏರ್ಪಡಿಸಿದ್ದ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಶಿಕ್ಷಕರಿಗೆ ಅಭಿನಂದಿಸಿ ಮಾತನಾಡಿದರು. ಜಗತ್ತಿನಲ್ಲಿ ಉನ್ನತ ಮಟ್ಟದ ಗೌರವಯುತ ಸ್ಥಾನ ಇರುವುದೆಂದರೆ ವಿದ್ಯೆ ಕಲಿಸಿದ ಶಿಕ್ಷಕರಿಗೆ ಮಾತ್ರ, ಪ್ರಾಥಮಿಕ ಹಂತದ ಕಲಿಕೆಯಿಂದಲೂ ವಿದ್ಯಾರ್ಥಿಗಳಿಗೆ ಜ್ಞಾನದ ಭಂಡಾರ ನೀಡಿ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ರೂಪಗೊಳ್ಳಲು ಶಿಕ್ಷಕರ ಪರಿಶ್ರಮವೇ ಕಾರಣ, ಗುರು ಕಲಿಸಿದ ವಿದ್ಯೆ ಸಾರ್ಥಕತೆ ಕಾಣಬೇಕೆಂದರೆ ಪ್ರತಿಯೊಬ್ಬರು ಗುರುವನ್ನು ಗೌರವಿಸುವಂತಹ ಸಂಸ್ಕಾರ ಕಲಿಯಬೇಕೆಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಟಿ.ಎನ್. ಓಂಕಾರೇಶ್ವರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಮಾಡುವ ಅವಕಾಶ ಕಲ್ಪಿಸಿದ ನಮ್ಮೆಲ್ಲಾ ಶಿಕ್ಷಕರ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಣ ಇಲಾಖೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯರೂಪಿಸಿದ ಸೇವೆ ನನ್ನ ಜೀವನದಲ್ಲಿ ಸಾರ್ಥಕ ಮನೋಭಾವ ಮೂಡಿಸಿದೆ, ನಿಮ್ಮೆಲ್ಲರ ಅಭಿಮಾನದ ಗೌರವ ನನ್ನ ಪ್ರಾಮಾಣಿಕ ಸೇವೆಗೆ ಸಂದ ಗೌರವ ಎಂದರು.ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್, ನಗರಸಭಾ ಸದಸ್ಯ ಎಸ್.ಎಲ್. ರಂಗನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಸುರೇಶ್, ರಾಜ್ಯ ಪರಿಷತ್ ಸದಸ್ಯ ಆರ್.ಲೋಕೇಶ್, ನಿರ್ದೇಶಕರಾದ ಆರ್.ದೇವರಾಜು, ಹನುಮಂತರಾಜು, ಮುಖಂಡ ಬರಗೂರು ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ, ಡಯಟ್ ನ ಹಿರಿಯ ಉಪನ್ಯಾಸಕ ಸಿ.ವಿ.ನಟರಾಜು, ಬಿ.ಆರ್.ಸಿ. ರಂಗಪ್ಪ, ಎಡಿಎಂಎಂ ರಾಮಚಂದ್ರಪ್ಪ, ಪತ್ರಾಂಕಿತ ವ್ಯವಸ್ಥಾಪಕ ಕುಮಾರ್, ಸೂಪರಿಡೆಂಟ್ ಜಯರಾಂ, ಶಿಕ್ಷಣ ಸಂಯೋಜಕ ಮಂಜಪ್ಪ, ಶಿಕ್ಷಕ ಪ್ರತಿನಿಧಿಗಳಾದ ಮಹದೇವಪ್ಪ, ಹೊನ್ನಗಂಗಪ್ಪ, ಮಂಜಪ್ಪ ಹಾಜರಿದ್ದರು.