ಸಾರಾಂಶ
ಗದಗ: ಶಿಕ್ಷಕರು ಉತ್ತಮ ಸಮಾಜದ ನಿರ್ಮಾಣದ ಮಹತ್ತರ ಜವಾಬ್ದಾರಿಯನ್ನು ಹೊಂದಿದವರಾಗಿದ್ದು, ಜ್ಞಾನ ಹೊಂದಿದ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರು, ವಿದ್ಯಾವಂತ ಬುದ್ಧಿವಂತ ಹಾಗೂ ಅರಿವು ಪಡೆದುಕೊಂಡಿರುವ ಜಾಣ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಮಹಾಮಹಿಮರಾಗಿದ್ದಾರೆ. ಈ ಮೂರು ಗುಣಗಳನ್ನು ಹೊಂದಿರುವ ಜ್ಞಾನವನ್ನು ಪಡೆದಿರುವ ವಿದ್ಯಾರ್ಥಿಯನ್ನು ಸಮಾಜಕ್ಕೆ ನೀಡಿದಾಗ ಉತ್ತಮ ಸಮಾಜ ಸಹಜವಾಗಿ ನಿರ್ಮಾಣವಾಗುತ್ತದೆ. ಅದಕ್ಕಾಗಿ ನೂತನವಾದ ಶಿಕ್ಷಣದ ತಂತ್ರಾಂಶಗಳನ್ನು ಉಪಯೋಗಿಸಿಕೊಂಡು ಉತ್ತಮ ಬೋಧನೆ ಮಾಡಿ ಎಂದರು. ಡಿಡಿಪಿಐ ಆರ್.ಎಸ್. ಬುರಡಿ ಮಾತನಾಡಿ, ಮಕ್ಕಳಿಗೆ ಬೋಧಿಸುವ ಮುನ್ನ ಪರಿಪೂರ್ಣವಾಗಿ ಕಲಿಯುವ ಕಾರ್ಯ ಶಿಕ್ಷಕರಿಂದ ಆಗಬೇಕಿದೆ. ಮಗುವಿನ ಭಾವನೆಗಳ ತಕ್ಕಂತೆ ಜ್ಞಾನವನ್ನು ನೀಡುವ ಕಲೆಯನ್ನು ವೈಜ್ಞಾನಿಕ ಯುಗದಲ್ಲಿ ಶಿಕ್ಷಕ ಸಮುದಾಯ ಪಾಲಿಸಬೇಕಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ಸಚಿವರ ಆಸೆಯದಂತೆ ಎಸ್ಸೆಸ್ಸೆಲ್ಸಿ ಫಲಿತಾಂಶ ಮೊದಲನೇ ಅಂಕಿಗೆ ಬರಬೇಕಿದೆ. ಆ ಮೂಲಕ ಜಿಲ್ಲೆಯ ಕೀರ್ತಿ ರಾಜ್ಯಕ್ಕೆ ಮಾದರಿಯಾಗಬೇಕಿದೆ. ಅದಕ್ಕಾಗಿ ನಾವೆಲ್ಲರೂ ಆ ಪ್ರಯತ್ನದಲ್ಲಿ ತಲ್ಲೀನರಾಗಿ ಮಕ್ಕಳ ಜ್ಞಾನದ ಹಸಿವಿಗೆ ಬೇಕಾಗುವ ವಿದ್ಯೆಯೆಂಬ ಆಹಾರವನ್ನು ನೀಡಿ ಉತ್ತಮ ಫಲಿತಾಂಶಕ್ಕೆ ಯತ್ನಿಸಬೇಕಿದೆ ಎಂದರು. ಬಿ.ಎಫ್. ಪೂಜಾರ ಮಾತನಾಡಿ, ಇಲಾಖೆಯೊಂದಿಗೆ ಶಿಕ್ಷಕ ವೃಂದ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗುವುದರೊಂದಿಗೆ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಕಾರ್ಯ ಮಾಡೋಣ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಅನುದಾನಿತ ಅನುದಾನರಹಿತ ಎಲ್ಲ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು. ಎಸ್ಸೆಸ್ಸೆಲ್ಸಿ ಫಲಿತಾಂಶದ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ, ಕಂಬಳಿ, ಮಂಗಳಾ ತಾಪಸ್ಕರ್, ಎಚ್.ಎನ್. ನಾಯಕ್, ವಿ.ವಿ. ನಡುವಿನಮನಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಯರಗುಡಿ ನಿರೂಪಿಸಿದರು. ಬಡಿಗೇರ ವಂದಿಸಿದರು.