ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ರೀತಿಯಲ್ಲಿ ತಿದ್ದುವ ಅವಕಾಶ ಇರುವುದು ಪೋಷರನ್ನು ಬಿಟ್ಟರೆ ಶಿಕ್ಷಕರಿಗೆ ಮಾತ್ರ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕಲಿಸಿ ಅವರನ್ನು ಉತ್ತಮ ಸ್ಥಾನಕ್ಕೇರಿಸುವಂತಹ ಗುರುತರ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಶಾಲಾ ಹಂತದ ಮಕ್ಕಳಿಗೆ ಶಿಕ್ಷಕರು ಪಾಠ ಪ್ರವಚನಗಳ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ ದೇಶ, ನಾಡು ಮತ್ತು ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ಅಂತಹ ಮಕ್ಕಳು ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ರೀತಿಯಲ್ಲಿ ತಿದ್ದುವ ಅವಕಾಶ ಇರುವುದು ಪೋಷರನ್ನು ಬಿಟ್ಟರೆ ಶಿಕ್ಷಕರಿಗೆ ಮಾತ್ರ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕಲಿಸಿ ಅವರನ್ನು ಉತ್ತಮ ಸ್ಥಾನಕ್ಕೇರಿಸುವಂತಹ ಗುರುತರ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ ಬೆಳೆಯಬೇಕು. ದೇಶದ ಬಗ್ಗೆ ಗೌರವ ಪ್ರೀತಿ ಹೆಚ್ಚಾಗುವ ರೀತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಅನೇಕ ವಿಚಾರ ತಿಳಿಸಿಕೊಟ್ಟರೆ ಮುಂದಿನ ಸಾಧನೆ ಗುರಿಯೊಂದಿಗೆ ಬದಲಾವಣೆಯಾಗಲು ಅವಕಾಶ ಸಿಗುತ್ತದೆ ಎಂದರು.ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಿತಕಾಯಲು ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳೂ ಕೂಡ ಉತ್ತಮ ಶಿಕ್ಷಣ, ಜ್ಞಾನ ಪಡೆದು ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂಬ ಉದ್ದೇಶದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಉಚಿತ ಪಠ್ಯ ಪುಸ್ತಕ, ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಅಗತ್ಯ ಮೌಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ನಿಮ್ಮ ಜೊತೆಗಿರುವಾಗ ಶಿಕ್ಷಕರಾದ ನೀವು ಸಮಾಜ ಮತ್ತು ಸಮುದಾಯಕ್ಕೆ ನಾವು ಯಾವ ರೀತಿ ಕೊಡುಗೆ ನೀಡಬೇಕೆಂಬುದನ್ನು ಬಹು ಮುಖ್ಯವಾಗಿ ಯೋಚಿಸಬೇಕಿದೆ ಎಂದರು.ಶಿಕ್ಷಕರ ದಿನದ ಮಹತ್ವ ಕುರಿತು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಧಾನ ಭಾಷಣ ಮಾಡಿದರು. ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿವಿಧ ಕ್ರೀಡೆ, ಸಾಂಸ್ಕೃತಿ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಸೇವಾ ನಿವೃತ್ತಿ ಹೊಂದಿದ 50ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ:ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮಾ ಹಾಗೂ ಐಟಿಐ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿರುವ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ೪೫೨ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವರು ವೈಯುಕ್ತಿಕವಾಗಿ ತಲಾ 2 ಸಾವಿರ ರು. ನಗದು ಮತ್ತು ನೆನಪಿನ ಕಾಣಿಕೆ ಕೊಟ್ಟು ಪುರಸ್ಕರಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಬೃಹತ್ ಭಾವಚಿತ್ರವನ್ನು ಅಲಂಕರಿಸಿದ್ದ ವಾಹನದಲ್ಲಿರಿಸಿ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ತಾಲೂಕು ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು.ಸಮಾರಂಭದಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು, ಡಯಟ್‌ನ ಪ್ರಾಂಶುಪಾಲ ಕೆ.ಯೋಗೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ತಾಲೂಕು ಘಟಕದ ಅಧ್ಯಕ್ಷ ಜೆ.ವೈ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ನಿವೃತ್ತ ಶಿಕ್ಷಕ ಬಿ.ಎಂ.ಪ್ರಕಾಶ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರುದ್ರೇಶ್ ಸೇರಿದಂತೆ ಹಲವರು ಇದ್ದರು.