ಸಾರಾಂಶ
ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ 74ನೇ ಜನ್ಮದಿನದ ಅಂಗವಾಗಿ ಶನಿವಾರ ತುಮಕೂರಿನ ವಿವಿಧೆಡೆ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜನ್ಮದಿನ ಹಿನ್ನೆಲೆ ಹಮ್ಮಿಕೊಂಡಿದ್ದ ಸೇವಾ ಕಾರ್ಯಕ್ರಮದಲ್ಲಿ ಭಾಗಿ
ಕನ್ನಡಪ್ರಭ ವಾರ್ತೆ ತುಮಕೂರುಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ 74ನೇ ಜನ್ಮದಿನದ ಅಂಗವಾಗಿ ಶನಿವಾರ ನಗರದ ವಿವಿಧೆಡೆ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಚಿವರ ಜನ್ಮದಿನ ಆಚರಣೆ ಪ್ರಯುಕ್ತ ಕ್ಯಾತ್ಸಂದ್ರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ವಿ.ಸೋಮಣ್ಣ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣನವರು ಭಾಗವಹಿಸಿ ಅಭಿಮಾನಿಗಳಿಂದ ಜನ್ಮದಿನದ ಶುಭಾಶಯ ಸ್ವೀಕರಿಸಿದರು.ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ನಾನು ಯವತ್ತೂ ಹುಟ್ಟುಹಬ್ಬ ಆಚರಣೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡಿಲ್ಲ. ಆದರೆ ಶಾಲಾ ಮಕ್ಕಳಿಗೆ ಸಹಿ ಕಳುಹಿಸಿಕೊಟ್ಟು ಆನಂದ ಪಟ್ಟಿದ್ದೆ. ಈ ಬಾರಿ ಈ ಶಾಲಾ ಮಕ್ಕಳ ಜೊತೆ ಭಾಗವಹಿಸಲು ಅವಕಾಶ ಸಿಕ್ಕಿದೆ ಎಂದರು.
ಬೆಂಗಳೂರು ಕಡೆಯಿಂದ ತುಮಕೂರು ನಗರ ಪ್ರವೇಶಿಸುವ ಭಾಗದಲ್ಲಿ ಆಕರ್ಷಕ ಮಹಾದ್ವಾರ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಪ್ರಧಾನಿ ನರೇಂದ್ರ ಮೋದಿ ಕನಸಿನ ಭಾರತವನ್ನು ಮುನ್ನಡೆಸುವ ಹೊಣೆಗಾರಿಕೆ ಮಕ್ಕಳ ಮೇಲಿದೆ. ಶಿಕ್ಷಕರು ಮಕ್ಕಳಲ್ಲಿ ದೇಶಪ್ರೇಮ ಮೂಡಿಸಿ, ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಿಬೇಕು ಎಂದು ಸಲಹೆ ನೀಡಿದರು.ಸಚಿವ ವಿ.ಸೋಮಣ್ಣ ಅವರು ನಗರ ಪಾಲಿಕೆಯ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದರು. ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಟೈ, ಬೆಲ್ಟ್, ಸಿಹಿ ವಿತರಿಸಲಾಯಿತು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ಡಿಡಿಪಿಐ ಮಂಜುನಾಥ್, ನಗರ ಪಾಲಿಕೆ ಮಾಜಿ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಅರವಿಂದ್, ಮುಖಂಡರಾದ ಯಜಮಾನ್ ಗಂಗಹನುಮಯ್ಯ, ಶಿವರಾಜ್, ರತ್ನಮ್ಮ, ಅನ್ಸರ್ ಪಾಷ, ದಯಾನಂದ್, ಸತ್ಯಣ್ಣ, ನಾಗೇಶ್ ಭಾಗವಹಿಸಿದ್ದರು.