ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಮಕ್ಕಳಿಗೆ ಪರೀಕ್ಷೆಯಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಯೂ ಉಪಯೋಗವಾಗುತ್ತವೆ. ಹೀಗಾಗಿ ಎರಡರಲ್ಲೂ ಆಸಕ್ತಿ ಹೊಂದಬೇಕು.
ಮುಂಡರಗಿ: ಶಾಲಾ ಹಂತದಲ್ಲಿ ಜರುಗುವ ಪಠ್ಯೇತರ ಚಟುವಟಿಕೆಯಲ್ಲಿ ಶಿಕ್ಷಕರೂ ಭಾಗವಹಿಸುವುದರಿಂದ ವಿದ್ಯಾರ್ಥಿಗಳನ್ನು ಪರಿಪೂರ್ಣ ಪ್ರಜೆಯನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ ಆಡಳಿತಾಧಿಕಾರಿ ಪ್ರೊ. ಸಿ.ಎಸ್. ಅರಸನಾಳ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಸ್ವಾಮಿ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿ ಪಠ್ಯೇತರ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಮಕ್ಕಳಿಗೆ ಪರೀಕ್ಷೆಯಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಯೂ ಉಪಯೋಗವಾಗುತ್ತವೆ. ಹೀಗಾಗಿ ಎರಡರಲ್ಲೂ ಆಸಕ್ತಿ ಹೊಂದಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷರಿಗಾಗಿ ಸಹಪಠ್ಯೇತರ ಚಟುವಟಿಕೆ ಶಿಕ್ಷಕರನ್ನು ಪರಿಣಾಮಕಾರಿ ಬೋಧನೆಗೆ ತಯಾರು ಮಾಡುತ್ತವೆ. ಮಕ್ಕಳ ಜ್ಞಾನಕ್ಕೆ ಇಳಿದು ಕಲಿಸುವ ತರಬೇತಿ ಈ ಪಠ್ಯೇತರ ಚಟುವಟಿಕೆಯಿಂದ ಸಿಗುತ್ತದೆ. ಅನೇಕ ಕ್ರಿಯಾಶೀಲತೆಯನ್ನು ಹೊಂದಿದ್ದ ಶಿಕ್ಷಕರಿಗೆ ಇದೊಂದು ವೇದಿಕೆಯಾಗಿದೆ ಎಂದರು.ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಸಜ್ಜನ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಸಿ. ಹರ್ತಿ, ಎ.ಡಿ. ಬಂಡಿ ಮಾತನಾಡಿದರು. ಕೆ. ಕೊಟ್ಟೂರಯ್ಯ, ವಿಶ್ವನಾಥ ಉಳ್ಳಾಗಡ್ಡಿ, ಕೆ.ಎಂ. ಮಾಯಮ್ಮನವರ, ಧನೇಶ ನಾಯಕ್, ಧನೇಶ ಲಮಾಣಿ ಉಪಸ್ಥಿತರಿದ್ದರು.
ಪ್ರೌಢ ವಿಭಾಗದ ಬಿಆರ್‌ಪಿ ಹನುಮರಡ್ಡಿ ಇಟಗಿ ಸ್ವಾಗತಿಸಿದರು. ನೋಡಲ್ ಅಧಿಕಾರಿ ಮನೋಹರ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.