ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ವಿವಿಧ ವೃತ್ತಿಗಳಲ್ಲಿ ಕೆಲಸ ನಿರ್ವಹಿಸುವುದರ ಮೂಲಕ ದೇಶದ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ಅಲಂಕರಿಸಿದ ಸಾಮಾನ್ಯ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣನ್‌ರ ಹೆಸರಿನಲ್ಲಿ ಶಿಕ್ಷಕರ ದಿನ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನುಡಿದರು.ನಗರದ ಆಂಜನೇಯರೆಡ್ಡಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬ ಸಾಮಾನ್ಯ ಶಿಕ್ಷಣ ವೃತ್ತಿಯಿಂದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಮಹಾನ್ ವ್ಯಕ್ತಿಯಾಗಿದ್ದು, ಸಾಮಾನ್ಯ ಶಿಕ್ಷಕ ಸಹ ತಮ್ಮ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ದಕ್ಷತೆಯ ಮೂಲಕ ರಾಷ್ಟ್ರಪತಿ ಹುದ್ದೆಗೇರಬಹುದೆಂಬುದಕ್ಕೆ ಸಾಕ್ಷಿಯಾಗಿದ್ದಾರೆ, ಎಲ್ಲರೂ ಸರ್ವಪಲ್ಲಿ ರಾಧಾಕೃಷ್ಣನ್‌ರ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಭವ್ಯ ಭಾರತ ನಿರ್ಮಾಣಕ್ಕೆ ನಾವು ಬದ್ಧರಾಗಿ ದುಡಿಯಬೇಕು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆಯಾದರೂ, ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆದು ಗುಣಾತ್ಮಕ ಶಿಕ್ಷಣವನ್ನು ಬೋಧನೆ ಮಾಡುವಲ್ಲಿ ಶಿಕ್ಷಕರು ವಿಫಲಗೊಳ್ಳುತ್ತಿರುವುದು ತರವಲ್ಲವೆಂದರು.೫ನೇ ತರಗತಿವರೆಗೆ ಪಾಠ ಮಾಡುವ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಹಲವು ತೊಂದರೆಗಳಿದ್ದವು. ಅವುಗಳನ್ನು ವೃಂದ ಮತ್ತು ನೇಮಕಾತಿ ಸಂದರ್ಭದಲ್ಲಿ ಬದಲಾವಣೆ ತರುವ ಮೂಲಕ ಶಿಕ್ಷಕರಿಗೆ ಒಂದು ಅವಕಾಶವನ್ನು ರಾಜ್ಯ ಸರ್ಕಾರ ಮಾಡಿಕೊಟ್ಟಿದೆ. ಇದನ್ನು ಶಿಕ್ಷಕರ ದಿನಾಚರಣೆಗೂ ಮೊದಲೇ ಇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ ಅದಕ್ಕೆ ಅನುಮೋದನೆಯನ್ನು ದೊರಕಿಸಿಕೊಡುವಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಶ್ರಮಿಸಿದ್ದಾರೆಂದರು.
ಫಲಿತಾಂಶದ ವಿಚಾರಕ್ಕೆ ಬಂದರೆ ದೇಶ, ರಾಜ್ಯ, ಜಿಲ್ಲೆ, ತಾಲೂಕಿನಲ್ಲಿ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ತರಬೇಕಾದ ಸುಧಾರಣೆಗಳನ್ನು ಹಾಗೂ ಫಲಿತಾಂಶದ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿದ್ದು, ಉತ್ತಮ ಫಲಿತಾಂಶದಿಂದ ತಾಲೂಕಿನ ಸ್ಥಾನಮಾನವು ಹೆಚ್ಚಾಗುವುದರ ಜೊತೆಗೆ ಶಿಕ್ಷಕರ ಮೇಲಿನ ಗೌರವವೂ ಹೆಚ್ಚಾಗುತ್ತದೆ ಎಂದು ಹೇಳಿದರು.ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಡಿಡಿಪಿಐ ವಿ.ರಮೇಶ್, ನಗರಸಭಾ ಅಧ್ಯಕ್ಷ ಆರ್.ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ತಾಲೂಕು ಗ್ಯಾರಂಟಿ ಯೋಜನಾ ಅಧ್ಯಕ್ಷ ಮುನಿನಾರಾಯಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಅಶೋಕ್ ಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಜಯರಾಮರೆಡ್ಡಿ, ನಗರಸಭಾ ಸದಸ್ಯರಾದ ರೇಖಾ ಉಮೇಶ್, ಶೋಭಾ ಆಂಜಿನಪ್ಪ, ತಾಪಂ ಇಒ ಎಸ್.ಆನಂದ್, ಗ್ರೇಡ್-೨ ತಹಸೀಲ್ದಾರ್ ರಾಜೇಂದ್ರ, ಪೌರಾಯುಕ್ತ ಜಿ.ಎನ್.ಚಲಪತಿ, ಶಿಕ್ಷಕ ಸುಬ್ಬಾರೆಡ್ಡಿ ಸೇರಿ ಎಲ್ಲಾ ಪದಾಧಿಕಾರಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಆಂಗ್ಲಭಾಷೆಯೆಡೆ ವಿದ್ಯಾರ್ಥಿಗಳ ವಲಸೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮುಖ್ಯ ಸಮಸ್ಯೆಯೆಂದರೆ ಶಿಕ್ಷಕರು ಆಂಗ್ಲ ಭಾಷೆಯಲ್ಲಿ ಕಲಿಕೆಗೆ ಆಸಕ್ತಿ ತೊರದಿರುವುದು, ಹಲವು ಶಾಲೆಗಳಲ್ಲಿ ಇಂದಿಗೂ ಕನ್ನಡ ಮಾಧ್ಯಮದಲ್ಲೇ ಬೋಧನೆ ಮಾಡುತ್ತಿರುವುದರಿಂದ, ವಿದ್ಯಾರ್ಥಿಗಳು ಆಂಗ್ಲಭಾಷೆಯೆಡೆಗೆ ವಲಸೆ ಹೋಗುತ್ತಿರುವುದು, ಖಾಸಗಿ ಶಾಲೆಗಳತ್ತ ಮುಖ ಮಾಡಿರುವುದು ಹಾಗೂ ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ ಎಂದರು. ಶಿಕ್ಷಕರು ತಮ್ಮ ಶಿಕ್ಷಣ ವೃತ್ತಿಯನ್ನು ಸ್ವಇಚ್ಛೆಯಿಂದ ರೂಪಿಸಿಕೊಂಡಿದ್ದು, ಯಾರದೋ ಶಿಫಾರಸ್ಸಿನ, ಬೇರೆಯವರ ಆದ್ಯತೆಗೆ ಒಳಗಾಗಿ ಶಿಕ್ಷಣ ವೃತ್ತಿಗೆ ಬಂದಿರುವುದಿಲ್ಲ. ಬದಲಾಗಿ ಸ್ವಂತ ಪರಿಶ್ರಮದಿಂದ ಶಿಕ್ಷಣ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಎಂದು ಸಚಿವರು ಹೇಳಿದರು.---------
‘ಸರ್ಕಾರಿ ಶಾಲಾ ಶಿಕ್ಷಕರು ಯಾವುದೇ ಖಾಸಗಿ ಶಾಲಾ ಶಿಕ್ಷಕರಿಗೆ ಕಡಿಮೆ ಇಲ್ಲದಂತೆ ಶಿಕ್ಷಣ ನೀಡುವ ಕೌಶಲ್ಯ ಹೊಂದಿರುತ್ತಾರೆ. ಸರ್ಕಾರಿ ಶಾಲಾ ಶಿಕ್ಷಕರಲ್ಲಿ ಅದ್ವಿತೀಯ ಜ್ಞಾನವಿದೆ, ಅದನ್ನು ಸದ್ಬಳಕೆ ಮಾಡಿಕೊಳ್ಳದಿರುವುದು ನೋವಿನ ವಿಚಾರವಾಗಿದ್ದು, ಸದ್ಬಳಸಿಕೊಂಡು ಖಾಸಗಿ ಶಾಲೆಗಳಿಗಿಂತ ಭಿನ್ನವಾದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿ ಉತ್ತಮ ಪ್ರಜೆಗಳನ್ನಾಗಿಸುವುದರ ಜೊತೆಗೆ ಉತ್ತಮ ಸಮಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕಾಗಿದೆ.’ಡಾ.ಎಂ.ಸಿ.ಸುಧಾಕರ್, ಉಸ್ತುವಾರಿ ಸಚಿವರು, ಕೋಲಾರ ಜಿಲ್ಲೆ