ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Aug 04 2024, 01:18 AM IST

ಸಾರಾಂಶ

ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸಹಕಾರದಿಂದ ಮಳವಳ್ಳಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಹಿನ್ನೆಲೆಯಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಶಿಕ್ಷಣವಂತರನ್ನು ಕಾಣುವ ಜೊತೆಗೆ ದೊಡ್ಡ ಹುದ್ದೆಗಳನ್ನು ಹೊಂದಿದ್ದರು. ಆದರೆ, ಇತ್ತಿಚಿನ ದಿನಗಳಲ್ಲಿ ತಾಲೂಕಿನಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ನೌಕರರ ವೇದಿಕೆ ಹಾಗೂ ಶಿಕ್ಷಣ ಇಲಾಖೆ ಎಲ್ಲಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರದಲ್ಲಿ ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ವ್ಯಕ್ತಿತ್ವ ವಿಕಸನ, ಒತ್ತಡ ನಿರ್ವಹಣೆ ಮತ್ತು ಸಮಯ ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಸಮಾಜದಲ್ಲಿ ಮಾದರಿಯಾಗಿರಬೇಕು, ಎಲ್ಲಾ ಕ್ಷೇತ್ರಗಳು ಕಲುಷಿತಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರ ವೃತ್ತಿ ಪವಿತ್ರವಾಗಿರುವುದರಿಂದ ಚುನಾವಣೆ ಹೊರತುಪಡಿಸಿ ಶಿಕ್ಷಕರು ರಾಜಕೀಯದಲ್ಲಿ ದೂರ ಇರಬೇಕೆಂದು ಸಲಹೆ ನೀಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸಹಕಾರದಿಂದ ಮಳವಳ್ಳಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಹಿನ್ನೆಲೆಯಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಶಿಕ್ಷಣವಂತರನ್ನು ಕಾಣುವ ಜೊತೆಗೆ ದೊಡ್ಡ ಹುದ್ದೆಗಳನ್ನು ಹೊಂದಿದ್ದರು. ಆದರೆ, ಇತ್ತಿಚಿನ ದಿನಗಳಲ್ಲಿ ತಾಲೂಕಿನಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಟ್ಯಾಬ್ ಮತ್ತು ಟಿವಿಯನ್ನು ಕೊಡಿಸುವುದರ ಮೂಲಕ ಸ್ಮಾರ್ಟ್ ಕ್ಲಾಸ್ ನಡೆಯಲು ಅನುವು ಮಾಡಿಕೊಡಲಾಗುವುದು, ಕೊಠಡಿಗಳ ನಮಸ್ಯೆ ನಿವಾರಿಸಲಾಗುವುದು, ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವುದು ನನ್ನ ಗುರಿಯಾಗಿದೆ ಎಂದರು.

ಶಿಕ್ಷಕರಿಗೆ ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿಯಾಗುವಂತೆ ಐಎಎಸ್ ಐಪಿಎಸ್ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಿಂದ ಕಾರ್ಯಾಗಾರ ನಡೆಸಲಾಗುತ್ತಿದೆ. ಶಿಕ್ಷಕರು ಪ್ರಯೋಜನ ಪಡೆದು ನಿಮ್ಮನ್ನೇ ನಂಬಿರುವ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಬೇಕೆಂದು ಹೇಳಿದರು.

ಅನುತೀರ್ಣಗೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹೊಸ ಬದುಕನ್ನು ನೀಡುವ ಉದ್ದೇಶದಿಂದ 10 ದಿನಗಳ ಕಾಲ ತರಬೇತಿ ನೀಡಿದ ಶಿಕ್ಷಕರಿಗೆ ಹಾಗೂ ಸಹಕಾರ ನೀಡಿದ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಸುರೇಶ್‌ಕುಮಾರ್ ಮಾತನಾಡಿ, ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವ್ಯಾಸಂಗ ಮಾಡಲು ಆಸಕ್ತಿ ಮೂಡಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಪರಿವರ್ತಿಸಿ ಶಿಕ್ಷಕರು ಶಿಕ್ಷಣ ನೀಡಬೇಕೆಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಶಿಕ್ಷಣ ನೀಡುವಂತ ಸರ್ಕಾರಿ ಶಾಲೆಗಳನ್ನು ಆರಂಭಿಸಲು ಶಾಸಕರು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ಪ್ರಾರಂಭದಲ್ಲಿಯೇ ತಾಂತ್ರಜ್ಞಾನದ ಶಿಕ್ಷಣವನ್ನು ನೀಡಿದರೇ ಮುಂದಿನ ದಿನಗಳಲ್ಲಿ ಉದ್ಯೋಗ ಅವಕಾಶಗಳಿಗೆ ಅನುಕೂಲವಾಗುತ್ತದೆ ಎಂದರು.

ಬಿಇಒ ಎಸ್ ಚಂದ್ರಪಾಟೀಲ್ ಮಾತನಾಡಿ, ಶಿಕ್ಷಕರನ್ನು ನಂಬಿ ಸಾವಿರಾರು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಶಿಕ್ಷಕರು ತಮ್ಮಲ್ಲಿರುವ ಪ್ರತಿಮೆ ಅನಾವರಣಗೊಳಿಸಿ ವಿದ್ಯಾರ್ಥಿಗಳಿಗೆ ಗುಣತ್ಮಾಕ ಶಿಕ್ಷಣವನ್ನು ನೀಡಬೇಕೆಂದು ಸಲಹೆ ನೀಡಿದರು

ತರಬೇತುದಾರ ಅಭಿರಾಮ್ ರೂಬಿ, ವ್ಯಕ್ತಿತ್ವವಿಕಸನದ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಲೋಕೇಶ್, ಚೆಸ್ಕಾಂ ಎಇಇ ಪ್ರೇಮ್ ಕುಮಾರ್, ಲೋಕಪಯೋಗಿ ಎಇ ಸೋಮಶೇಖರ್, ಪ.ಜಾ.ನೌ.ವೇದಿಕೆ ರಾಜ್ಯ ಸಂಚಾಲಕ ಚಂದ್ರಶೇಖರ್, ವಿ.ಭೂ.ಸ್ವಾಧೀನಾಧಿಕಾರಿಗಳು, ವೆಂಕಟರಾಮು, ಸಮನ್ವಯಾಧಿಕಾರಿ ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹದೇವು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರು ಇದ್ದರು.