ಸಾರಾಂಶ
ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ಎಂ.ಪಿ.ಕವಿರಾಜ್ ವರ್ಗಾವಣೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕು ಆಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ತಾಪಂ ಮತ್ತು ಕಂದಾಯ ಇಲಾಖೆ ಸಮನ್ವಯತೆ ಬಹುಮುಖ್ಯ. ಈ ನಿಟ್ಟಿನಲ್ಲಿ ಕವಿರಾಜ್ ಅವರು ಕೆಲಸ, ಸಹಕಾರ ಕಡೂರಿಗೆ ಇನ್ನಷ್ಟು ಬೇಕಿತ್ತು ಎಂದು ತಾಲೂಕು ಪಂಚಾಯಿತಿ ಇಓ ಸಿ.ಆರ್.ಪ್ರವೀಣ್ ಹೇಳಿದರು.
ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ಎಂ.ಪಿ.ಕವಿರಾಜ್ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಯಿಂದ ತಾ.ಪಂ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿ ಮಾತನಾಡಿದ ಅವರು, ಉತ್ತಮ ಜ್ಞಾನ ಭಂಡಾರವಿರುವ ಕವಿರಾಜ್ ಅವರೊಂದಿಗೆ ತಾವು ಈ ಹಿಂದೆ ಕೆಲಸ ಮಾಡಿದ್ದು ಸಣ್ಣ ನೌಕರರಿಗೂ ತೊಂದರೆ ಆಗದಂತೆ ನೌಕರರಿಗೆ ಸರಕಾರಿ ಕೆಲಸ ಹೇಳಿಕೊಡುವ ಮೂಲಕ ಮಾದರಿ ಯಾಗಿದ್ದರು. ಮುಂದೆ ಉನ್ನತ ಹುದ್ದೆಗಳಲ್ಲಿ ಯಶಸ್ಸು ಗಳಿಸಲಿ ಎಂದು ಹಾರೈಸಿದರು.ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಎಂ.ಪಿ.ಕವಿರಾಜ್, ಶಿಕಾರಿಪುರದಿಂದ ಚುನಾವಣಾ ಕರ್ತವ್ಯಕ್ಕಾಗಿ ನಾನು ಕಡೂರಿಗೆ ನಿಯೋಜನೆಗೊಂಡೆ. ಚುನಾವಣೆ ನಂತರ ಶಾಸಕ ಕೆ ಎಸ್ ಆನಂದ್ ರವರು ತಮ್ಮ ಉತ್ತಮ ಸಹಕಾರ ನೀಡಿ ತಾಲೂಕು ಆಡಳಿತಕ್ಕೆ ಉತ್ತಮ ಹೆಸರು ಬರಲು ಮತ್ತು ನಮ್ಮ ಜಿಲ್ಲಾಧಿಕಾರಿ, ನೌಕರರು ನನಗೂ ಅತಿ ಹೆಚ್ಚಿನ ಸಹಕಾರ ನೀಡಿದರು ಎಂದರು.
ನನ್ನ ಪುತ್ರ ಜನಿಸಿದ್ದು ಕಡೂರಿನಲ್ಲಿ, ನನ್ನ ಆರೋಗ್ಯ ಕೂಡ ವ್ಯತ್ಯಾಸವಾಗಿ, ಹುಷಾರಾಗಿ ಮರು ಜೀವ ಪಡೆದಿರುವುದು ಕಡೂರಿನಲ್ಲಿ ಹಾಗಾಗಿ ನನ್ನ ಜೀವನದಲ್ಲಿ ಕಡೂರನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು. ತಾವೇನಾದರೂ ಕರ್ತವ್ಯದ ವಿಚಾರದಲ್ಲಿ ನನ್ನ ನೌಕರರು, ಅಧಿಕಾರಿಗಳಿಗೆ ನೋವಾಗುವಂತೆ ಮಾತನಾಡಿದ್ದರೆ ಕ್ಷಮಿಸಿ ಎಂದು ವಿನಂತಿಸಿದಾಗ ಇಲಾಖೆ ನೌಕರರೂ ಕೂಡ ಭಾವುಕರಾದರು.ಕಂದಾಯ ಅಧಿಕಾರಿಗಳು, ಗ್ರಾಮ ಸೇವಕರು ಮಾತನಾಡಿ, ಕಂದಾಯ ಇಲಾಖೆ ಕಾರ್ಯಗಳನ್ನು ಸುಲಲಿತವಾಗಿ ನಡೆಯುವಂತೆ ಮಾಡಿ ಸಿಬ್ಬಂದಿಗಳೊಡನೆ ಸ್ನೇಹಪೂರ್ವಕವಾಗಿ ನಡೆದುಕೊಂಡು ಸರ್ಕಾರಿ ನೌಕರರಿಗೆ ಮಾರ್ಗದರ್ಶಿ ಯಾಗಿದ್ದ ಕವಿರಾಜ್ ಅವರನ್ನು ಕಡೂರು ಮರೆಯಲಾಗದು ಎಂದರು. ಈ ಸಂದರ್ಭದಲ್ಲಿ ನಿವೃತ್ತ ಗ್ರಾಮ ಆಡಳಿತಾಧಿಕಾರಿ ಹನುಮಂತಪ್ಪ, ಮಹದೇವಪ್ಪ, ವರ್ಗಾವಣೆಯಾದ ಆರ್.ಐ. ಲವಕುಮಾರ್, ಸುನಿಲ್, ಮಹೇಶ್, ಸಂತೋಷ್ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.
ನೂತನ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಉಪ ತಹಸೀಲ್ದಾರ್ ಮಂಜುನಾಥ್, ಕಲ್ಮರುಡಪ್ಪ, ಬಿಇಒ ಸಿದ್ದರಾಜುನಾಯ್ಕ, ಅಧಿಕಾರಿಗಳಾದ ನಾಗರತ್ನ, ರವಿಕುಮಾರ್, ಲಿಂಗರಾಜು,ಮಂಜುನಾಥ್, ನೌಕರರ ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ, ಅಶೋಕ್, ವಿಜಯಕುಮಾರ್ ಮತ್ತಿತರರು ಇದ್ದರು. 3ಕೆಕೆಡಿಯು1.ವರ್ಗಾವಣೆಗೊಂಡ ಕಡೂರು ತಹಸೀಲ್ದಾರ್ ಎಂ.ಪಿ.ಕವಿರಾಜ್ ಅವರಿಗೆ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಂದ ಗೌರವಿಸಿ ಬೀಳ್ಕೊಡಲಾಯಿತು.