ಮುನಿರಾಬಾದ್: ಶಿಕ್ಷಕರು ಮಕ್ಕಳಿಗೆ ಕೇವಲ ಅಕ್ಷರ ಕಲಿಸಿದರೆ ಸಾರ್ಥಕವಾಗುವುದಿಲ್ಲ, ಅದರೊಂದಿಗೆ ಜೀವನದ ಮೌಲ್ಯ, ಹಿರಿಯರಿಗೆ ಗೌರವಿಸುವದನ್ನು ಕಲಿಸಬೇಕು ಎಂದು ವಿಜಯನಗರ ಕಿಂಡರ್ ಗಾರ್ಡನ್ ಶಾಲೆಯ ಅಧ್ಯಕ್ಷ ಜಾಲಿ ಪ್ರಕಾಶ್ ಹೇಳಿದರು.
ಅವರು ಶುಕ್ರವಾರ ರಾತ್ರಿ ವಿಜಯನಗರ ಕಿಂಡರ್ ಗಾರ್ಡನ್ ಶಾಲೆಯ ವಾರ್ಷಿಕೋತ್ಸವ, ವಸಂತೋತ್ಸವದ ನಿಮಿತ್ತ ಸಭೆಯ ನ್ನುದ್ದೇಶಿಸಿ ಮಾತನಾಡಿದರು.ಶಿಕ್ಷಕರ ಮೇಲೆ ಅಪಾರ ಜವಾಬ್ದಾರಿ ಇದೆ. 3 ವರ್ಷದ ಬುದ್ಧಿ 100 ವರ್ಷದವರೆಗೆ ಎಂಬ ನಾಣ್ಣುಡಿ ಇದೆ. ಅಂದರೆ ಶಿಕ್ಷಕರು ಮಕ್ಕಳಿಗೆ ಬಲವಾದ ಬುನಾದಿ ಹಾಕಿದರೆ ಅದು ಅವರ ಕೊನೆ ಉಸಿರು ಇರುವವರೆಗೂ ಇರುತ್ತದೆ ಎಂದರು.
ಶಿಕ್ಷಣವೆಂದರೆ ಕೇವಲ ಪಾಠವಲ್ಲ, ಅದು ಮಕ್ಕಳ ವ್ಯಕ್ತಿತ್ವ ನಿರ್ಮಿಸುತ್ತದೆ.ಈ ನಿಟ್ಟಿನಲ್ಲಿ ವಿಜಯನಗರ ಕಿಂಡರ್ ಗಾರ್ಡ್‌ನ ಶಾಲೆಯ ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.12 ವರ್ಷಗಳ ಹಿಂದೆ ಶಾಲೆ ಪ್ರಾರಂಭವಾದಾಗ ಶಾಲೆಯಲ್ಲಿ ಕೇವಲ 40 ವಿದ್ಯಾರ್ಥಿಗಳಿದ್ದರು.ಇಂದು ಶಾಲೆಯಲ್ಲಿ ಸುಮಾರು 700 ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಇದೆಲ್ಲವೂ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಪರಿಶ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ಸಾಧ್ಯವಾಯಿತು ಎಂದರು.ಕೊಪ್ಪಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಾಲಚಂದ್ರ ಮಾತನಾಡಿ, ಹಿಂದುಳಿದ ಪ್ರದೇಶವಾದ ಮುನಿರಾಬಾದ್ ನಲ್ಲಿ ಉತ್ತಮ ಶಾಲೆ ಪ್ರಾರಂಭಿಸಬೇಕೆಂದು ವಿ.ವಿ.ಸಂಘಕ್ಕೆ ಮನವಿ ಮಾಡಿದಾಗ ಮನವಿಗೆ ಸ್ಪಂದಿಸಿ ಮಕ್ಕಳಿಗೆ ಒಂದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಶಾಲೆ ಮುನಿರಾಬಾದಿನಲ್ಲಿ ಪ್ರಾರಂಭಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಏಷ್ಯಾನೆಟ್ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಕರ್ನಾಟಕ ಸಹಕಾರಿ ಶಿರೋಮಣಿ ರತ್ನ ಪ್ರಶಸ್ತಿ ಪುರಸ್ಕೃತ ಸಹಕಾರಿ ಧುರೀಣ ಅಮರೇಶ್ ಪಾಟೀಲ್ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಸೋಮಶೇಖರ್ ಹಿಟ್ನಾಳ್,ಕಿಂಡರ್ ಗಾರ್ಡನ್ ಶಾಲೆಯ ಮುಖ್ಯೋ ಪಾಧ್ಯಾಯನಿ ಪವಿತ್ರ, ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ್, ಪದವಿಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯ ಬಸವರಾಜ್, ಮಲ್ಲಿಕಾರ್ಜುನ್ ಗೌಡ, ನಾಗರಾಜ್, ಉಮಾಶಂಕರ್, ಉಮಾಪತಿ, ಅಮರೇಗೌಡ ಪಾಟೀಲ್, ಶಿವಶರಣೆ ಗೌಡ ಹಾಗೂ ನಾಗರಾಜ್ ಸ್ವಾಮಿ ಉಪಸ್ಥಿತರಿದ್ದರು.
ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.