ಸಮೀಕ್ಷೆಗೆ ಸರ್ವರ್ ಕಿರಿಕಿರಿಗೆ ಶಿಕ್ಷಕರ ಅಸಮಾಧಾನ

| Published : Sep 26 2025, 02:10 AM IST

ಸಮೀಕ್ಷೆಗೆ ಸರ್ವರ್ ಕಿರಿಕಿರಿಗೆ ಶಿಕ್ಷಕರ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಮಹತ್ವದ ಸಾಮಾಜಿಕ ಶೈಕ್ಷಣಿಕ ಗಣತಿ ಕಾರ್ಯಕ್ಕೆ ಎರಡ್ಮೂರು ದಿನಗಳಿಂದ ಸರ್ವರ್ ಸಮಸ್ಯೆ ಕಾಡುತ್ತಿರುವುದರಿಂದ ಶಿಕ್ಷಕರು ಸಮೀಕ್ಷಾ ಕಾರ್ಯ ಮಾಡಲು ಬೇಸರ ವ್ಯಕ್ತಪಡಿಸಿದ್ದಲ್ಲದೇ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ರಾಜ್ಯ ಸರ್ಕಾರದ ಮಹತ್ವದ ಸಾಮಾಜಿಕ ಶೈಕ್ಷಣಿಕ ಗಣತಿ ಕಾರ್ಯಕ್ಕೆ ಎರಡ್ಮೂರು ದಿನಗಳಿಂದ ಸರ್ವರ್ ಸಮಸ್ಯೆ ಕಾಡುತ್ತಿರುವುದರಿಂದ ಶಿಕ್ಷಕರು ಸಮೀಕ್ಷಾ ಕಾರ್ಯ ಮಾಡಲು ಬೇಸರ ವ್ಯಕ್ತಪಡಿಸಿದ್ದಲ್ಲದೇ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದಲ್ಲಿ ನಡೆಯಿತು.

ಶಿಕ್ಷಕರ ಸಂಘದ ವೈ.ಎಸ್.ಮಜ್ಜಗಿ ಮಾತನಾಡಿ, ಸರ್ಕಾರ ನಮಗೆ ಸಮೀಕ್ಷೆ ಕೆಲಸಕ್ಕೆ ಕಳಿಸಿದೆ. ಇದುವರೆಗೂ ಆದೇಶ ಪ್ರತಿ ನೀಡಿಲ್ಲ. ಬೆಳಗ್ಗೆ 10 ಗಂಟೆಗೆ ಬರಬೇಕಾದ ಒಬಿಸಿ ಇಲಾಖೆ ಅಧಿಕಾರಿಗಳೂ ಇದುವರೆಗೂ ಬಂದಿಲ್ಲ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಸಮೀಕ್ಷೆ ಕಾರ್ಯ ಮಾಡುವುದೇ ದೊಡ್ಡ ಸವಾಲಾಗಿದ್ದು, ಪದೇ ಪದೆ ಸರ್ವರ್ ಸಮಸ್ಯೆ ಕಾಡುತ್ತಿರುವುದರಿಂದ ಒಂದೇ ಒಂದು ಮನೆ ಸಮೀಕ್ಷೆ ಮಾಡಲು ಆಗುತ್ತಿಲ್ಲ. ನಾಲ್ಕು ದಿನ ಕಳೆದರೂ ಸರ್ವರ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ. 15 ದಿನದಲ್ಲಿ ಸಮೀಕ್ಷಾ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಒಬ್ಬ ಶಿಕ್ಷಕರಿಗೆ ಒಂದೇ ಊರಿನಲ್ಲಿ ಸಮೀಕ್ಷೆ ಕಾರ್ಯ ನೀಡದೇ ಬೇರೆ ಗ್ರಾಮದ ಸಮೀಕ್ಷೆ ಕಾರ್ಯ ನೀಡಿದ್ದು, ತೊಂದರೆಯಾಗಿದೆ ಎಂದು ದೂರಿದರು.

ಸರ್ಕಾರ ನಮಗೆ ನೀಡಿರುವ ನ್ಯಾವಿಗೇಶನ್ ಪ್ರಕಾರ ಮನೆ ಹುಡುಕಾಡಿದರೆ ಅದರಲ್ಲಿ ತೋರಿಸಿದ ಕಡೆ ಇರುವುದಿಲ್ಲ. 3-4 ಮನೆಯ ನ್ಯಾವಿಗೇಶನ್ ಸರ್ಚ್‌ ಮಾಡಿದಾಗ ಸ್ಮಶಾನದ ಕಡೇ ತೋರಿಸಿದೆ. ಬೇರೆ ಸರ್ಚ್‌ ಮಾಡಿದರೆ ಹೆಸ್ಕಾಂ ಇಲಾಖೆ ಕಚೇರಿ ತೋರಿಸುತ್ತಿದೆ. ಹೀಗಾದರೆ ಮನೆ ಹುಡುಕಿ ಸರ್ವೆ ಮಾಡುವುದು ಹೇಗೆ? ಎಂದು ಸಮೀಕ್ಷಾ ಕಾರ್ಯದ ಶಿಕ್ಷಕರು ಪ್ರಶ್ನಿಸಿದ್ದಾರೆ.

ರಾಜಗೋಪಾಲ ಉಂಡಿಗೇರ, ಎಸ್.ಬಿ.ಪಟ್ಟಣಶೆಟ್ಟಿ, ದಸಮನಿ, ಅನ್ನಪೂರ್ಣ ಬಿ, ಎಸ್.ಆರ್.ರೂಡಗಿ, ಎಸ್.ಎಚ್.ಕರನಾಲಗಿ, ರಾಜು ಹುನಗುಂದ, ಎಸ್.ಎಸ್.ಮೂಲಿಮನಿ, ಜಗದೀಶ ಬುಳ್ಳಾ, ಬಿ.ಟಿ.ಮೇದಾರ, ಸಂತೋಷ ಬೆನ್ನೂರ, ವೆಂಕಟೇಶ ಹೂನೂರು, ಗೀತಾ ಲೋನಿ, ಮೀನಾಕ್ಷಿ ಆರಿ, ಎಸ್.ಜಿ.ತೋಟಗೇರ, ಎಂ.ಎಂ.ಮುದಗಲ್ಲ, ರತ್ನಾ ರಂಗರೇಜಿ, ಎಸ್.ಎಸ್.ಆಡಿನ, ವಿದ್ಯಾ ಕೊಟಗಿ, ಸವಿತಾ ಬೊಮ್ಮಸಾಗರ, ಜೆ.ಎ.ಕಾನಡೆ ಸೇರಿದಂತೆ ಇತರರು ಇದ್ದರುಬಾಕ್ಸ್‌---

ಗಣತಿ ಕಾರ್ಯ ವೀಕ್ಷಿಸಿದ ಜಿಪಂ ಸಿಇಓ:

ಕಳೆದ ಮೂರು ದಿನಗಳಿಂದ ಗಣತಿ ಕಾರ್ಯ ತಾಂತ್ರಿಕ ದೋಷದಿಂದ ಸಾಕಷ್ಟು ವಿಳಂಬವಾಗುತ್ತಿದೆ ಎಂಬ ಶಿಕ್ಷಕರ ಅಸಮಾಧಾನ ಮಧ್ಯೆ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಗುರುವಾರ ತಾಲೂಕಿನ ಕೋಟೆಕಲ್ ಗ್ರಾಮಕ್ಕೆ ಭೇಟಿ ನೀಡಿ ಮನೆಯ ಗಣತಿ ಕಾರ್ಯ ವೀಕ್ಷಿಸಿ ಮನೆಯ ಗಣತಿ ಯಶಸ್ವಿಯಾದ ಬಳಿಕ ಅಲ್ಲಿಂದ ತೆರಳಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಹೇಮಲತಾ ಶಿಂಧೆ, ಕೋಟೆಕಲ್ ಪಿಡಿಒ ಆರತಿ ಕ್ಷತ್ರಿ, ಕಟಗೇರಿ ಗ್ರಾಪಂ ಪಿಡಿಒ ರಾಮಚಂದ್ರ ಮೇತ್ರಿ, ಗಣತಿ ನಿರತ ಶಿಕ್ಷಕಿ ಪಾರ್ವತಿ ಅರುಣಸಗಿ, ಸಿಆರ್ ಪಿ ಭಾಗೀರತಿ ಆಲೂರ, ಶಿಕ್ಷಕಿ ಜಮುನಾ ಸಿಂಗದ ಸೇರಿದಂತೆ ಇತರರು ಇದ್ದರು. ಮೂರು ದಿನಗಳಲ್ಲಿ 20 ಮನೆಗಳ ಗಣತಿ ಮಾಡಿರುವುದಾಗಿ ಗಣತಿದಾರ ಶಿಕ್ಷಕಿಯರು ಸಿಇಒ ಅವರಿಗೆ ಹೇಳಿದರು.

ಗಣತಿ ಕಾರ್ಯದಲ್ಲಿ 5 ಪ್ರತಿಶತ ತಾಂತ್ರಿಕ ದೋಷ ಕಂಡು ಬಂದಿದೆ. ಜಿಲ್ಲೆಯ ಶಿಕ್ಷಕರು ಈ ಕುರಿತು ನಮ್ಮ ಗಮನಕ್ಕೂ ತಂದಿದ್ದಾರೆ. ರಾಜ್ಯ ಮಟ್ಟದಲ್ಲಿ ದೋಷ ಸರಿಪಡಿಸುವ ಕಾರ್ಯ ನಡೆದಿದೆ. ಈ ಕುರಿತು ಮುಖ್ಯಮಂತ್ರಿಗಳು ಶುಕ್ರವಾರ ಬೆಂಗಳೂರಲ್ಲಿ ಸಭೆ ನಡೆಸಲಿದ್ದಾರೆ. ಶಿಕ್ಷಕರಿಗೆ ತೊಂದರೆಯಾಗದಂತೆ ಗಣತಿ ಕಾರ್ಯ ಸುಗಮವಾಗಲು ಪ್ರಯತ್ನಿಸುತ್ತೇವೆ ಎಂದು ಶಶಿಧರ ಕುರೇರ ತಿಳಿಸಿದರು.