ಕರ್ತವ್ಯಲೋಪ ಎಸಗುವ ಶಿಕ್ಷಕರಿಗೆ ಬಿಸಿ ಮುಟ್ಟಿಸಬೇಕಿದೆ: ಶಾಸಕ ಸುಬ್ಬಾರೆಡ್ಡಿ ಎಚ್ಚರಿಕೆ

| Published : Jul 24 2025, 01:05 AM IST / Updated: Jul 24 2025, 01:06 AM IST

ಕರ್ತವ್ಯಲೋಪ ಎಸಗುವ ಶಿಕ್ಷಕರಿಗೆ ಬಿಸಿ ಮುಟ್ಟಿಸಬೇಕಿದೆ: ಶಾಸಕ ಸುಬ್ಬಾರೆಡ್ಡಿ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿ, ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು. ನಿಮಗೆ ಏನಾದರೂ ಸಮಸ್ಯೆಯಿದ್ದರೆ ನನಗೆ ತಿಳಿಸಿ, ಬಗೆಹರಿಸುವ ಕೆಲಸ ಮಾಡುತ್ತೇನೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸರ್ಕಾರಿ ಶಾಲಾ ಶಿಕ್ಷಕರು ಶಾಲೆಗಳು ಆರಂಭವಾಗಿ ಸಮಯ ಮುಗಿದಿದ್ದರೂ ಕೂಡ ಇನ್ನೂ ಕರ್ತವ್ಯಕ್ಕೆ ಹಾಜರಾಗದೇ ಇರುವುದರ ಬಗ್ಗೆ ದೂರುಗಳು ಬರುತ್ತಿವೆ, ನಾನು ಶಿಕ್ಷಣ ಹಾಗೂ ಆರೋಗ್ಯದ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ಕರ್ತವ್ಯ ಲೋಪ ಎಸಗುವಂಥ ಶಿಕ್ಷಕರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು.

ಇತ್ತೀಚೆಗೆ ಸರ್ಕಾರಿ ಶಾಲೆಗಳ ಶಿಕ್ಷಕರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಅದರಲ್ಲೂ ಇತ್ತೀಚೆಗೆ ಜಾತ್ರೆ ಅಥವಾ ಬಾಡೂಟದಂಥ ಕಾರ್ಯಕ್ರಮಗಳಿದ್ದರೆ ಸಾಕು, ಶಾಲೆಗಳಲ್ಲಿನ ಶಿಕ್ಷಕರು ಶಾಲೆಗೆ ಚಕ್ಕರ್ ಹೊಡೆದು ಆ ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ. ನಾನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಈ ರೀತಿಯ ಲೋಪದೋಷಗಳು ಕಂಡು ಬಂದರೆ ಖಂಡಿತ ಕ್ಷಮಿಸುವುದಿಲ್ಲ. ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವಂತಹ ಶಿಕ್ಷಕರಿಗೆ ಬಿಇಒ ಅಥವಾ ತಾಲೂಕು ಮಟ್ಟದ ಅಧಿಕಾರಿಗಳು ನೋಟಿಸ್ ನೀಡಬೇಕು. ಇಲ್ಲವಾದಲ್ಲಿ ನಾನೇ ನೇರವಾಗಿ ಅಂಥ ಶಿಕ್ಷಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದರು.

ಇನ್ನು ತಾಲೂಕಿನ ಹಲವು ಕಡೆ ಕೆಲ ಖಾಸಗಿ ವ್ಯಕ್ತಿಗಳು ಸರ್ಕಾರಿ ಭೂಮಿಗೆ ಬೇಲಿ ಹಾಕಿಕೊಂಡು ಲೇಔಟ್ ಮಾದರಿಗಳಲ್ಲಿ ಜಮೀನು ದುರಸ್ತಿ ಮಾಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಅದರಲ್ಲೂ ಕೆಲವರು 10 ಎಕರೆಗೂ ಅಧಿಕ ಜಮೀನನ್ನು ಕಬಳಿಸಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ತಹಸೀಲ್ದಾರ್ ರವರು ಕೂಡಲೇ ಆ ಜಾಗಕ್ಕೆ ತೆರಳಿ ಯಾವುದೇ ಮುಲಾಜಿಲ್ಲದೇ ತೆರವು ಮಾಡಿಸಬೇಕು. ಜೊತೆಗೆ ಕೆಲ ರಿಯಲ್ ಎಸ್ಟೇಟ್ ಮಾಲೀಕರು ಬಡವರಿಂದ ಕಡಿಮೆ ಹಣಕ್ಕೆ ಜಮೀನು ಖರೀದಿಸಿ, ಅವರ ಮಾಹಿತಿಗೆ ಇಲ್ಲದಂತೆ ಆ ಸ.ನಂ ನಲ್ಲಿರುವ ಖರಾಬು ಜಮೀನನ್ನೂ ಸಹ ಅವರ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸಂಪೂರ್ಣ ಮಾಹಿತಿ ನೀಡಬೇಕೆಂದು ತಹಸೀಲ್ದಾರ್ ರವರಿಗೆ ಸೂಚನೆ ನೀಡಿದರು.

ಬಳಿಕ ತಾಲೂಕು ಪಂಚಾಯಿತಿ ಅಧಿಕಾರಿಗಳಿಂದ ಇಲಾಖೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಇಒ ರವರಿಗೆ ತಾಲೂಕಿನಾದ್ಯಂತ ನಿವೇಶನ ರಹಿತರರಿಗೆ ಸರ್ಕಾರದಿಂದ ನಿವೇಶನ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಸಮಯದಲ್ಲಿ ತಾಪಂ ಇಒ ನಾಗಮಣಿ ಮಾಹಿತಿ ನೀಡಿ, ಈಗಾಗಲೇ ತಾಲೂಕಿನಲ್ಲಿ 750 ನಿವೇಶನಗಳನ್ನು ಮಂಜೂರು ಮಾಡಲು ಸಿದ್ಧಪಡಿಸುತ್ತಿದ್ದು, 625 ಫಲಾನುಭವಿಗಳ ಪಟ್ಟಿ ಸಿದ್ಧವಾಗಿದೆ. ಉಳಿಕೆ ಇರುವ 125 ನಿವೇಶನಗಳನ್ನು ಸಹ ಬೇಗ ಸಿದ್ಧಪಡಿಸುತ್ತೇವೆಂದು ತಿಳಿಸಿದರು.

ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿ, ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು. ನಿಮಗೆ ಏನಾದರೂ ಸಮಸ್ಯೆಯಿದ್ದರೆ ನನಗೆ ತಿಳಿಸಿ, ಬಗೆಹರಿಸುವ ಕೆಲಸ ಮಾಡುತ್ತೇನೆ. ಜನರ ಕೆಲಸ ಮಾಡಿಕೊಡಲು ಏನಾದರೂ ವಿಳಂಬ ಅಥವಾ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ತಹಸೀಲ್ದಾರ್ ಸಿಗ್ಬತ್ತುಲ್ಲಾ, ಇಒ ನಾಗಮಣಿ, ನಾಮನಿರ್ದೇಶಿತ ಸದಸ್ಯರಾದ ಬೈರಾರೆಡ್ಡಿ, ಲಕ್ಷ್ಮೀನಾರಾಯಣ, ಗಂಗರಾಜು, ರಿಯಾಜ್ ಪಾಷ, ಗುರುಮೂರ್ತಿ, ಇಂದಿರಾ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.