ಶಾಲೆಯಲ್ಲಿ ಪಾಠ ಮಾಡದ ಶಿಕ್ಷಕರು; ದೂರು ಪತ್ರ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆ

| Published : Oct 28 2025, 12:18 AM IST

ಶಾಲೆಯಲ್ಲಿ ಪಾಠ ಮಾಡದ ಶಿಕ್ಷಕರು; ದೂರು ಪತ್ರ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ. ಕೆಲವು ಶಿಕ್ಷಕರು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ದೂರು ಪತ್ರ ಹಿಡಿದು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ. ಕೆಲವು ಶಿಕ್ಷಕರು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ದೂರು ಪತ್ರ ಹಿಡಿದು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿಗೆ ಆಗಮಿಸಿದ ವಿದ್ಯಾರ್ಥಿಗಳು ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಿ ಶಿಕ್ಷಕರ ವಿರುದ್ದ ಆಕ್ರೋಶ ಹೊರ ಹಾಕಿದರು. ನಮಗೆ ನ್ಯಾಯಕೊಡಿಸುವಂತೆ ತಾಲೂಕು ಆಡಳಿತವನ್ನು ಒತ್ತಾಯಿಸಿದರು.

ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲವು ಶಿಕ್ಷಕರು ಸರಿಯಾಗಿ ಪಾಠ ಪ್ರವಚನ ಮಾಡುತ್ತಿಲ್ಲ. ಇದನ್ನು ಪ್ರಶ್ನಿಸುವ ಮಕ್ಕಳಿಗೆ ಬೆದರಿಕೆ ಹಾಕುವ ಜತೆಗೆ ಅಶ್ಲೀಲ ಪದ ಉಪಯೋಗಿಸಿ ಅಸಭ್ಯವಾಗಿ ಮಾತನಾಡಿತ್ತಾರೆ. ಪ್ರಶ್ನೆ ಮಾಡುವ ಮಕ್ಕಳ ವಿಡಿಯೋ, ಪೋಟೋ ತೆಗೆದುಕೊಂಡು ನಿಮ್ಮ ಬಾಲ ಕಟ್ ಮಾಡುತ್ತೇವೆ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಶಿಕ್ಷಕರ ದುರ್ವತನೆ ಬಗ್ಗೆ ಸ್ಥಳೀಯ ಶಾಸಕ ದರ್ಶನ್ ಪುಟ್ಟಣ್ಣಯ್ಯರ ಗಮನಕ್ಕೂ ತಂದೆವು. ಅವರು ಸಹ ಒಮ್ಮೆ ಶಾಲೆಗೆ ಭೇಟಿಕೊಟ್ಟು ಶಿಕ್ಷಕರೊಂದಿಗೆ ಚರ್ಚಿಸಿದ್ದಾರೆ. ಬಳಿಕವೂ ಶಿಕ್ಷಕರ ವರ್ತನೆ ಮುಂದುವರೆದಿದೆ ಎಂದು ದೂರಿದರು.

ಈ ವಿಚಾರವಾಗಿ ಮಕ್ಕಳ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಿದ್ದೇವೆ. ಅಲ್ಲಿನ ಅಧಿಕಾರಿಗಳು ಬಂದು ಮಕ್ಕಳೊಂದಿಗೆ ಚರ್ಚಿಸಿ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ಶಿಕ್ಷಕರ ಈ ವರ್ತನೆಯಿಂದಾಗಿ ಸರಿಯಾಗಿ ಪಾಠ ಕೇಳಲು ಆಗುತ್ತಿಲ್ಲ, ಮಾನಸಿಕವಾಗಿ ಒತ್ತಡವಾಗುತ್ತಿದೆ. ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಧನಲಕ್ಷ್ಮೀ, ಮೇಘನ, ಶಿಲ್ಪಶ್ರೀ, ದೀಪಿಕ, ಉದಯ್‌ಗೌಡ, ಧವನಕುಮಾರ್, ಭುವನ್, ಶಿವರಾಜು, ಧನುಷ್‌ಗೌಡ, ದುರ್ಗೇಶ್, ಚಂದನ, ಶ್ರೀಹರಿ ಹಾಜರಿದ್ದರು.

ಬಳಿಕ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರು ಮಕ್ಕಳೊಂದಿಗೆ ಶಾಲೆಗೆ ಆಗಮಿಸಿ ಮಕ್ಕಳ ಸಮಸ್ಯೆ ಕುರಿತು ಚರ್ಚಿಸಿದರು. ಬಳಿಕ ಶಿಕ್ಷಕರಿಗೂ ಸಹ ತಿಳಿ ಹೇಳಿದರು. ಶಿಕ್ಷಕರ ನಡುವಳಿಕೆ ಬಗ್ಗೆ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಾಕೇಗೌಡರು ಸಹ ಬೇಸರ ವ್ಯಕ್ತಪಡಿಸಿದರು.

ಈ ವೇಳೆ ತಹಸೀಲ್ದಾರ್, ಮಕ್ಕಳು ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿಕೊಟ್ಟು ಚರ್ಚಿಸಿದ್ದೇನೆ. ಮೇಲ್ನೋಟಕ್ಕೆ ಇಲ್ಲಿ ಶಿಕ್ಷಕರ ಬಣಗಳು ಕಾಣುತ್ತಿವೆ. ಶಿಕ್ಷಕರಿಗೆ ಸೂಚನೆ ಕೊಟ್ಟು ಕೊನೆ ಅವಕಾಶ ಕೊಟ್ಟಿದ್ದೇವೆ. ಹೀಗೆ ಮುಂದುವರೆದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗೆ ಜಯಶಂಕರ್ ಆಯ್ಕೆ

ಮಂಡ್ಯ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಿವೃತ್ತ ಪ್ರೌಢ ಶಾಲಾ ಮುಖ್ಯ ಶಿಕ್ಷಕ, ಪ್ಲಾಸ್ಟಿಕ್ ವಿರೋಧಿ ಪರಿಸರ ಮಿತ್ರ ಗೊರವಾಲೆ ಜಯಶಂಕರ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗೆ ಜಿಲ್ಲಾಡಳಿತ ಆಯ್ಕೆ ಮಾಡಿದೆ. ಅ.28 ರಂದು ಮಂಡ್ಯ ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.