ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರಗಳನ್ನು ಕಲಿಸಿ ಜೀವನದಲ್ಲಿ ದೊಡ್ಡವ್ಯಕ್ತಿಗಳನ್ನಾಗಿ ರೂಪಿಸುವ ಗುರುಗಳು ಕೊನೆಯವರೆಗೂ ಗುರುಗಳಾಗಿಯೇ ಉಳಿದುಕೊಳ್ಳುತ್ತಾರೆ ಎಂದು ಚಿತ್ರನಟ ಪ್ರೇಮ್ ಹೇಳಿದರು.ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ದತ್ತಿಟ್ರಸ್ಟ್ ವತಿಯಿಂದ ನಡೆದ ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ಗುರುಗಳಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಡಾಕ್ಟರ್, ಇಂಜಿನಿಯರ್, ಉದ್ಯಮಿ ಸೇರಿದಂತೆ ದೊಡ್ಡದೊಡ್ಡ ಅಧಿಕಾರಿಗಳಾಗಿ ರೂಪುಗೊಳ್ಳುತ್ತಾರೆ. ಆದರೆ, ವಿದ್ಯೆ ಕೊಟ್ಟ ಗುರುಗಳು ಮಾತ್ರ ಕೊನೆಯವರೆಗೂ ಗುರುಗಳಾಗಿಯೇ ಉಳಿದುಕೊಳ್ಳುತ್ತಾರೆ ಎಂದರು.
ಗುರು ಸ್ಥಾನ ಎನ್ನುವುದು ಬಹಳ ದೊಡ್ಡದು. ವಿದ್ಯೆ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಗುರುಭಕ್ತಿ ರೂಡಿಸಿಕೊಳ್ಳಬೇಕು. ಪೋಷಕರು ಮಕ್ಕಳನ್ನು ದೇಶಕ್ಕೆ ಅನ್ನಕೊಡುವ ರೈತ, ದೇಶಕಾಯುವ ಸೈನಿಕರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಎಸ್‌ಟಿಜಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಬೇಕಿರುವ ಉತ್ತಮವಾದ ವಾತಾವರಣ ನಿರ್ಮಾಣ ಮಾಡಿದೆ. ನಾನು ಹಲವು ಶಿಕ್ಷಣ ಸಂಸ್ಥೆಗಳಿಗೆ ಹೋಗಿದ್ದೇನೆ. ಅದರಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ತುಂಬಾ ಚನ್ನಾಗಿವೆ. ಆದರೆ, ನಾನು ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಬಂದಾಗ ನನಗೆ ಅಚ್ಚ ಕನ್ನಡದ ವಾತಾವರಣ ಕಂಡುಬಂತು ಎಂದರು.
ಸಂಸ್ಥೆ ಸಿಇಒ ಸಿ.ಪಿ.ಶಿವರಾಜು ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ ವಿದೇಶದಲ್ಲಿಯೇ ನೆಲೆಸಿ ದೊಡ್ಡ ಕಂಪನಿಗಳನ್ನು ಕಟ್ಟಿಕೊಂಡು ಅಲ್ಲಿಯೇ ನೆಲಸಬಹುದಾಗಿತ್ತು. ಆದರೆ, ತಮ್ಮ ತಂದೆ ಹುಟ್ಟಿದ ಚಿನಕುರಳಿ ಗ್ರಾಮದಲ್ಲಿಯೇ ಇಷ್ಟೊಂದು ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ, ಇದು ಸಿ.ಪಿ.ಶಿವರಾಜು ಅವರ ದೊಡ್ಡಗುಣ ಎಂದು ಬಣ್ಣಿಸಿದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ದಿನಗಳಲ್ಲಿ ಕಟ್ಟಪಟ್ಟು ಓದಿ ಭವಿಷ್ಯ ರೂಪಿಸಿಕೊಂಡರೆ ನಾವು ಮುಂದೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದರು.
ದ್ವಿತೀಯ ಪಿಯುಸಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಘಟ್ಟವಾಗಿದೆ. ಈ ಹಂತದಲ್ಲಿ ಯಶಸ್ಸು ಕಂಡು ಕೊಂಡರೆ ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಸಂಸ್ಥೆ ಸಿಇಒ ಸಿ.ಪಿ.ಶಿವರಾಜು, ಕಾರ್‍ಯದರ್ಶಿ ಹರೀಶ್ ಹಾಗೂ ಉಪನ್ಯಾಸಕ ವರ್ಗದವರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಕೆಲಸ ಮಾಡುತ್ತಿದ್ದಾರೆ. ಅದರ ಸದ್ಬಳಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡುವ ಮೂಲಕ ಓದಿದ ಶಾಲೆಗೆ, ಜನ್ಮಕೊಟ್ಟ ಪೋಷಕರಿಗೆ ಹೆಸರು ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಸಮಾರಂಭವನ್ನು ಡಿಡಿಪಿಐ ಸಿ.ಚಲುವಯ್ಯ ಉದ್ಘಾಟಿಸಿ ಮಾತನಾಡಿ, ಎಸ್‌ಟಿಜಿ ಶಿಕ್ಷಣ ಸಂಸ್ಥೆಯೂ ಹಲವು ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಉತ್ತಮವಾದ ಸಂಸ್ಥೆಯನ್ನು ನಿರ್ಮಿಸಲು ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಇಟ್ಟುಕೊಂಡು ಓದಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. ಮಕ್ಕಳಿಂದ ಮೂಡಿಬಂದ ನೃತ್ಯ ಪ್ರದರ್ಶನವನ್ನು ಕಂಡು ಪೋಷಕರು ಸಂಭ್ರಮಿಸಿದರು.ಸಮಾರಂಭದಲ್ಲಿ ಅಮೆರಿಕಾದ ವಕೀಲ ಅಮರನಾಥ್‌ಗೌಡ, ಉದ್ಯಮಿ ವಿಶ್ವಾಮಿತ್ರ, ಈ ಸಂಜೆ ಪತ್ರಿಕೆ ಸಂಪಾದಕ ಎಂ.ನಾಗರಾಜು, ಶಾಂತಿನಿಕೇತನ ಕುಮಾರಸ್ವಾಮಿ, ಜಿಪಂ ಮಾಜಿ ಸದಸ್ಯೆ ನಾಗಮ್ಮಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು, ಕಾರ್‍ಯದರ್ಶಿ ಸಿ.ಹರೀಶ್, ಪ್ರಾಂಶುಪಾಲ ಮಾರುತಿ, ಆಡಳಿತಾಧಿಕಾರಿ ನಿವೇದಿತ ನಾಗೇಶ್, ಮುಖ್ಯಶಿಕ್ಷಕಿ ಮಾಚಮ್ಮ ಸೇರಿದಂತೆ ಹಲವರು ಇದ್ದರು.