ಸಾರಾಂಶ
ಹೊನ್ನಾವರ:
ಮಕ್ಕಳ ಅಂತರಂಗದಲ್ಲಿ ಪ್ರೀತಿಯ ಬೀಜ ಬಿತ್ತುತ್ತ ಅಕ್ಷರ ಮೊಳೆಯುವಂತೆ ಮಾಡುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಡಾ. ಶ್ರೀಪಾದ ಶೆಟ್ಟಿ ಹೇಳಿದರು.ತಾಲೂಕಿನ ಹಳದೀಪುರ ಚಂಡೇಶ್ವರದ ಶಿಕ್ಷಕ ಶಶಿಧರ ದೇವಾಡಿಗ ಅವರ ಮನೆಯಂಗಳದಲ್ಲಿ ನಡೆದ ಸಾಕ್ಷಿ ಬಳಗದ ಮನೆಯಂಗಳದಲ್ಲಿ ಸಾಕ್ಷಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾಲು ಬಹು ದೊಡ್ಡದಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ಮಾಡುವ ಪ್ರತಿಯೊಂದು ಕಾರ್ಯಕ್ರಮ ಯಶಸ್ಸಿನ ಒಂದು ಭಾಗವಾಗಿದೆ ಎಂದರು.ವಿದ್ಯಾರ್ಥಿ ಪ್ರತೀಕ್ಷಾ ರವಿ ಮುಕ್ರಿ ಪಾಟಿ ಚೀಲ ಕೃತಿ ಬಿಡುಗಡೆ ಮಾಡಿ, ನನ್ನ ಬದುಕಿನ ಅಮೂಲ್ಯ ಕ್ಷಣ ಇದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪಾಟಿ ಚೀಲ ಓದುವ ಮೂಲಕ ಸಾಹಿತ್ಯದ ಒಲವು ಮೂಡಿಸಿಕೊಳ್ಳಬೇಕು ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿದರು. ಸಾಹಿತಿ ಪುಟ್ಟು ಕುಲಕರ್ಣಿ, ಕುಮಟಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಭಟ್ ಸೂರಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ, ತಾಲೂಕು ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಎಸ್.ಎಚ್. ಗೌಡ, ಹಳದಿಪುರ ಗ್ರಾಪಂ ಉಪಾಧ್ಯಕ್ಷ ಅಜಿತ್ ನಾಯ್ಕ ಇದ್ದರು.
ಕವಿಯಿತ್ರಿ ಮಾದೇವಿ ಗೌಡ ಕೃತಿ ಪರಿಚಯಿಸಿದರು. ಶಿಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಎಚ್. ಪಾಟಿ ಚೀಲ ಕವನ ಸಂಕಲನದ ಕವಿತೆಯನ್ನು ರಾಗ ಸಂಯೋಜಿಸಿ ಹಾಡಿದರು. ಶಿಕ್ಷಕ ಶಶಿಧರ ದೇವಾಡಿಗ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ರಾಮ ಗೌಡ ವಂದಿಸಿದರು. ಶಿಕ್ಷಕಿ ಶಶಿಕಲಾ ನಾಯ್ಕ ಮತ್ತು ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾರ ಪಿ.ಆರ್. ನಾಯ್ಕ, ಸಾಕ್ಷಿ ಬಳಗದ ಸಂಚಾಲಕ ಜನಾರ್ದನ ಹರ್ನೀರು, ಪ್ರೊ. ಪ್ರಮೋದ್ ನಾಯ್ಕ, ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮಮತಾ ನಾಯ್ಕ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿ.ಜಿ. ನಾಯ್ಕ, ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.