ಸಾರಾಂಶ
ಬುಧವಾರ ಎಂಜಿಎಂ ಕಾಲೇಜಿನಲ್ಲಿ ನಡೆದ ಮುದ್ದಣ ಸಾಹಿತ್ಯೋತ್ಸವದಲ್ಲಿ ‘ಯುವಜನತೆ ಮತ್ತು ಪರಿಸರ ಕಾಳಜಿ’ ಎಂಬ ವಿಷಯದಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಅವಿಭಜಿತ ದಕ ಜಿಲ್ಲೆಯಲ್ಲಿ 22 ನದಿಗಳು ಹರಿಯುತ್ತಿದ್ದರೂ ಬೇಸಿಗೆ ಕಾಲದಲ್ಲಿ ನೀರಿಲ್ಲದೆ ಪರದಾಡುತ್ತಿದ್ದೇವೆ. ಯಾಂತ್ರಿಕ ಜನಾಂಗ ನಿರ್ಮಾಣವಾಗುತ್ತಿದೆ. ಆಸ್ಪತ್ರೆಯಲ್ಲೇ ಹುಟ್ಟಿ ಆಸ್ಪತ್ರೆಯಲ್ಲೇ ಬೆಳೆದು ಆಸ್ಪತ್ರೆಯಲ್ಲೆ ಸಾಯುವ ಮಕ್ಕಳನ್ನು ಸೃಷ್ಟಿಸುತಿದ್ದೇವೆ. ಈ ಅಪಾಯ ಎದುರಿಸಬೇಕಾದರೇ ಈಗಲೇ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಹೇಳಿದ್ದಾರೆ.ಬುಧವಾರ ಎಂಜಿಎಂ ಕಾಲೇಜಿನಲ್ಲಿ ನಡೆದ ಮುದ್ದಣ ಸಾಹಿತ್ಯೋತ್ಸವದಲ್ಲಿ ‘ಯುವಜನತೆ ಮತ್ತು ಪರಿಸರ ಕಾಳಜಿ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ರಾಷ್ಟ್ರಪತಿಯಿಂದ ಸಾಮಾನ್ಯ ನಾಗರಿಕನವರೆಗೆ ಎಲ್ಲರೂ ಪರಿಸರವಾದಿಗಳಾಗಬೇಕು. ಪ್ರಕೃತಿ ಬಗ್ಗೆ ಶಾಲಾ ಪಠ್ಯಗಳಲ್ಲಿ ಕಲಿತರೆ ಪ್ರಯೋಜನವಿಲ್ಲ. ಪರಿಸರವನ್ನು ಪರಿಸರದೊಳಗಿದ್ದು ಕಲಿಯುವುದು ಅತೀ ಅವಶ್ಯವಾಗಿದೆ. ಇಲ್ಲದಿದ್ದರೆ ಯುವಜನಾಂಗ ನಿಸರ್ಗ ಸಂಬಂಧದಿಂದ ಕಳಚಿಕೊಳ್ಳುವ ಅಪಾಯವಿದೆ ಎಂದನರು ಆತಂಕ ವ್ಯಕ್ತಪಡಿಸಿದರು.ಈ ಸಂದರ್ಭ ಸಾಹಿತಿ ರಘುನಂದನ್ ಅವರ ‘ತುಯ್ತವೆಲ್ಲ ನವ್ಯದತ್ತ ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ’ ವಿಮರ್ಶಾ ಕೃತಿಗೆ ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ ನಾಯಕ್, ಪಪೂ ಕಾಲೇಜು ಪ್ರಾಂಶುಪಾಲೆ ಮಾಲತಿದೇವಿ, ಉಪಪ್ರಾಂಶುಪಾಲ ಡಾ. ವಿಶ್ವನಾಥ ಪೈ ಎಂ. ಉಪಸ್ಥಿತರಿದ್ದರು.ಕನ್ನಡ ವಿಭಾಗ ಮುಖ್ಯಸ್ಥ ಡಾ. ಪುತ್ತಿ ವಸಂತ ಕುಮಾರ್ ಸ್ವಾಗತಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಗದೀಶ್ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು.