ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು, ಶ್ರೇಷ್ಠ ಸೇವೆ. ಶಿಕ್ಷಕ ಸಮುದಾಯದವರು ಎಲ್ಲ ಕ್ಷೇತ್ರಗಳನ್ನು ಬೆಳೆಸುವಂತಹ ಗಾರುಡಿಗರು ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ಬಿ.ಕೆ. ರವಿ ಹೇಳಿದರು.

ನಗರ ಹೊರವಲಯದ ಚಿತ್ರಾವತಿ ಬಳಿಯ ಬೆಂಗಳೂರು ಉತ್ತರ ವಿವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವರಾಗಿ ನಿವೃತ್ತರಾದ ಡಾ. ಎನ್. ಲೋಕನಾಥ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಎಂಬುದು ಸಾಮಾಜಿಕ ಬದಲಾವಣೆ ತರುವ ಹುದ್ದೆ. ಈ ಸೇವೆ ಸಿಗುವುದು ತುಂಬಾ ಅದೃಷ್ಟವಂತರಿಗೆ ಮಾತ್ರ. ಆ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಪ್ರತಿ ಕ್ಷಣವೂ ಕಲಿಸುವ ತಹತಹ ಇಮ್ಮಡಿಗೊಳಿಸಿಕೊಳ್ಳಬೇಕು. ಶಿಕ್ಷಕನಿಗೆ ನಿವೃತ್ತಿ ಇರುವುದಿಲ್ಲ. ಲೋಕನಾಥ್ ರವರು ಇದೇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ 31 ವರ್ಷ ಸೇವೆ ಸಲ್ಲಿಸಿ, ನಂತರ ಮೌಲ್ಯಮಾಪನ ಕುಲಸಚಿವರಾಗಿ ಸಾರ್ಥಕ ಕೆಲಸ ಮಾಡಿ ಈಗ ನಿವೃತ್ತಿ ಹೊಂದಿರುವುದು ಸಂತಸದ ವಿಷಯವಾಗಿದೆ ಎಂದರು.

ಸೌಮ್ಯ ಸ್ವಭಾವ:


ನಿವೃತ್ತ ಪ್ರಾಂಶುಪಾಲ, ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ, ನಮ್ಮತನ ಯಾವತ್ತಿದ್ದರೂ ಅಳಿದು ಹೋಗದಂತೆ ವಿಶ್ವದ ಭೂಪಟದಲ್ಲಿ ನಾವು ಮಿಂಚಬೇಕು ಎನ್ನುವ ಮಾತಿನಂತೆ, ಲೋಕನಾಥ್ ರವರು ನಮ್ಮ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಣಾರ್ಥಿಯಾಗಿ ಬಂದು ಪ್ರಾಧ್ಯಾಪಕರಾಗಿ ಬೆಳೆದು ನಿಂತು ಮೌಲ್ಯಮಾಪನ ಕುಲಸಚಿವರಾಗಿ ಮೂಲಕ ಸಾಧನೆ ಮಾಡಿದ್ದಾರೆ. ಅವರದ್ದು ಸೌಮ್ಯ-ಗಂಭೀರ ಸ್ವಭಾವ. ವ್ಯತಿರಿಕ್ತ ಸಂದರ್ಭಗಳಲ್ಲಿ ಕಷ್ಟಗಳನ್ನು ಅನುಭವಿಸಿ ಯಾರೂ ಬೆಳೆದು ಬರುತ್ತಾರೋ ಅವರಿಗೆ ಸಾಧನೆ ಮಾಡುವ ಹುಮ್ಮಸ್ಸಿರುತ್ತದೆ ಎಂದರು.

ಲೋಕನಾಥ್‌ ಮಾದರಿ:

ನಿವೃತ್ತ ಪ್ರಾಧ್ಯಾಪಕ, ಬಿ.ಜಿ.ಎಸ್. ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ ಮಾತನಾಡಿ, ಲೋಕನಾಥ್ ಅವರು ಶಿಕ್ಷಣ ಮಹಾವಿದ್ಯಾಲಯದ ಪ್ರಮುಖ ಆಧಾರಸ್ತಂಭದಂತಿದ್ದು ಮಹಾವಿದ್ಯಾಲಯದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರು ತಮಗೆ ವಹಿಸಿಕೊಟ್ಟ ಎಲ್ಲದರಲ್ಲೂ ಅತ್ಯುತ್ತಮವಾದದ್ದನ್ನು ಮಾತ್ರ ನೀಡಿದ್ದಾರೆ. ಅವರ ಪ್ರೀತಿಯ ಮತ್ತು ಸುಲಭವಾಗಿ ಸಂಪರ್ಕಿಸಬಹುದಾದ ಸ್ವಭಾವದಿಂದಾಗಿ ಅವರು ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೂ ಸಮಾನವಾಗಿ ಜನಪ್ರಿಯರಾಗಿದ್ದರು ಎಂದರು.

ಲೋಕನಾಥ್ ಅವರು ಮಾರ್ಗದರ್ಶನ ನೀಡಿದ ಪ್ರತಿಯೊಬ್ಬರಿಗೂ ಅವರು ಪ್ರೇರಣೆ ಮತ್ತು ಮಾದರಿಯಾಗಿದ್ದರು. ಆರಂಭದಿಂದಲೂ ಅವರೊಂದಿಗೆ ಕೆಲಸ ಮಾಡಿದ ಅವರ ಸಹೋದ್ಯೋಗಿಗಳು ಇಂದು ಅವರಿಗೆ ಶುಭ ಹಾರೈಸಲು ಇಲ್ಲಿದ್ದಾರೆ. ಅವರು ಯಾವ ರೀತಿಯ ವ್ಯಕ್ತಿಯಾಗಿದ್ದರು ಮತ್ತು ಇಲ್ಲಿವರೆಗೆ ಇದ್ದಾರೆ ಎಂಬುದಕ್ಕೆ ಇದು ಸಾಕಷ್ಟು ಪುರಾವೆಯಾಗಿದೆ. ಅವರ ಅನುಭವದ ವರ್ಷಗಳ ಹೊರತಾಗಿಯೂ ಅವರು ಇನ್ನೂ ವಿನಮ್ರ ಜೀವನವನ್ನು ನಡೆಸುತ್ತಿದ್ದಾರೆ. ನಾವೆಲ್ಲರೂ ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಅವರು ಪರಿಪೂರ್ಣ ಉದಾಹರಣೆ. ನಾವು ಈಗಾಗಲೇ ಅವರಿಂದ ಕಲಿತದ್ದು ಬಹಳಷ್ಟಿದೆ. ನಾವು ಇನ್ನೂ ಕಲಿಯುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಜಿ.ಪಿ. ಬಾಹುಬಲಿ, ಪ್ರಾಧ್ಯಾಪಕ ಡಾ. ಶಂಕರ್, ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ, ಕಾಲೇಜಿನ ಸಿಬ್ಬಂದಿ, ಶಿಕ್ಷಕರು, ಲೋಕನಾಥರ ಅಪಾರ ಶಿಷ್ಯವರ್ಗ ಹಾಗೂ ಅಭಿಮಾನಿಗಳು ಇದ್ದರು.

ಬಾಕ್ಸ್... ನಿವೃತ್ತಿ ಅನ್ನೋದು ಇರಲ್ಲ: ಡಾ. ಲೋಕನಾಥ್ಮೌಲ್ಯಮಾಪನ ವಿಭಾಗ ನಿವೃತ್ತ ಕುಲಸಚಿವ ಡಾ. ಎನ್.ಲೋಕನಾಥ್ ಮಾತನಾಡಿ, ಶಿಕ್ಷಕ, ಸಾಹಿತಿ, ಪತ್ರಕರ್ತ, ಹೋರಾಟಗಾರರಿಗೆ ನಿವೃತ್ತಿ ಅನ್ನೋದು ಇರುವುದಿಲ್ಲ. ಹಾಗಾಗಿ ಇರುವ ವೃತ್ತಿ ಬಿಟ್ಟು ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗುವುದಷ್ಟೆ ಇರುತ್ತದೆ. ತಂದೆ, ತಾಯಿ, ಗುರುಗಳು, ಕುಟುಂಬಸ್ಥರು, ಸಹೋದ್ಯೋಗಿಗಳು ತಮಗಾಗಿ ನೀಡಿದ ಸಹಕಾರವನ್ನು ಮತ್ತು ಪ್ರಾಧ್ಯಾಪಕರಾಗಿ, ಮೌಲ್ಯಮಾಪನ ಕುಲಸಚಿವರಾಗಲು ಸವೆಸಿದ ಹಾದಿಯನ್ನು ನೆನಪಿಸಿ ಕೊಂಡಾಗ ನೆರೆದವರ ಕಣ್ಣಾಲಿಗಳು ತೇವಗೊಂಡವು.

ಸಿಕೆಬಿ-2

ನಗರ ಹೊರವಲಯದ ಚಿತ್ರಾವತಿ ಬಳಿಯ ಬೆಂಗಳೂರು ಉತ್ತರ ವಿವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಬೆಂಗಳೂರು ಉತ್ತರ ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ಎನ್. ಲೋಕನಾಥ್ ಮತ್ತು ಅವರ ಧರ್ಮಪತ್ನಿ ವೀಣಾ ಅವರನ್ನು ಉಪ ಕುಲಪತಿ ಡಾ.ಬಿ.ಕೆ. ರವಿ ಅವರು ಸನ್ಮಾನಿಸಿದರು.