ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕೆಪಿಸಿಎಲ್ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡ ಪ್ರಕರಣ ಸಂಬಂಧ ತನಿಖೆಗೆ ತಂಡ ರಚಿಸಲು ಸೂಚನೆ ನೀಡಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.ಬಿಡದಿ ಸಮೀಪದ ಬೈರಮಂಗಲ ಕ್ರಾಸ್ ಬಳಿಯ ಕೆಪಿಸಿಎಲ್ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಐವರು ಕಾರ್ಮಿಕರು ಗಾಯಗೊಂಡ ಹಿನ್ನೆಲೆಯಲ್ಲಿ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತ್ಯಾಜ್ಯ ಉತ್ಪಾದನಾ ಘಟಕದಲ್ಲಿ ಅವಘಡ ಸಂಭವಿಸಿರುವುದು ವಿಷಾದನೀಯ. ಕಾರ್ಮಿಕರು ಬಾಯ್ಲರ್ ಆಪರೇಟ್ ಮಾಡುವ ಹಾಗಿಲ್ಲ. ಆದರೆ, ಏಕೆ ಮಾಡಿದರೆಂದು ಗೊತ್ತಿಲ್ಲ. ಈ ಬಗ್ಗೆ ತಂಡ ರಚಿಸಿ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ತನಿಖಾ ವರದಿ ಬಂದ ಮೇಲೆ ನಿರ್ಲಕ್ಷ್ಯ ತೋರಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದರು.ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಉಷ್ಣ ವಿದ್ಯುತ್ ಸ್ಥಾವರದ ಬಾಯ್ಲರ್ ಅನ್ನು ತಾಂತ್ರಿಕ ಪರಿಣತರಿಲ್ಲದೇ ತೆರೆದ ಕಾರಣ ಬೆಂಕಿ ಹಾಗೂ ಬಿಸಿ ಬೂದಿ ಅಲ್ಲಿದ್ದ ಕಾರ್ಮಿಕರ ಮೇಲೆ ಏಕಾಏಕಿ ಚಿಮ್ಮಿದೆ. ಇದರಿಂದಾಗಿ ಇಂತಹ ಅನಾಹುತ ಸಂಭವಿಸಿದೆ ಎಂದು ತಿಳಿಸಿದರು.
ಘಟನೆಯಲ್ಲಿ ಗಾಯಗೊಂಡಿದ್ದ ಐವರು ಕಾರ್ಮಿಕರ ಪೈಕಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ನಾಲ್ವರು ಕಾರ್ಮಿಕರಿಗೆ ಚಿಕಿತ್ಸೆ ಮುಂದುವರಿದಿದೆ. ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.ಘಟಕ ಉದ್ಘಾಟನೆಗೂ ಮುನ್ನವೇ ಅವಘಡ ಸಂಭವಿಸಿದೆ. ಹಾಗಾಗಿ ಎಲ್ಲವನ್ನೂ ಸರಿಪಡಿಸಿಕೊಂಡು ಉದ್ಘಾಟನೆ ಮಾಡುತ್ತೇವೆ. ಇಲ್ಲಿ ಕೇವಲ ವಿದ್ಯುತ್ ಉತ್ಪಾದನೆ ಮಾಡುವುದಷ್ಟೇ ನಮ್ಮ ಗುರಿ ಅಲ್ಲ. ಬೆಂಗಳೂರಿನ ಕಸದ ಸಮಸ್ಯೆ ನಿರ್ವಹಣೆಗೆ ಈ ಘಟಕ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಘಟಕದಿಂದ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ಘಟಕದಿಂದ ವಾಸನೆ ಬರುವುದಿಲ್ಲ, ಕಸ ತರುವ ಲಾರಿಯಿಂದ ವಾಸನೆ ಬರುತ್ತಿದೆ. ಆದ್ದರಿಂದ ತ್ಯಾಜ್ಯವನ್ನು ಹೊತ್ತು ತರುವ ಲಾರಿಗಳು ತ್ಯಾಜ್ಯವನ್ನು ಮುಚ್ಚಿ ತರಬೇಕು ಎಂದು ತಿಳಿಸಲಾಗಿದೆ. ಕಸ ಸುರಿದು ಹೋಗುವ ಖಾಲಿ ಲಾರಿಯನ್ನು ತಕ್ಷಣ ಅಲ್ಲೇ ಸ್ವಚ್ಛ ಮಾಡಲು ತಿಳಿಸಲಾಗುವುದು. ಇದರಿಂದ ಯಾವುದೇ ವಾಸನೆ ಬರುವುದಿಲ್ಲ ಎಂದು ಉತ್ತರಿಸಿದರು.ಕಾರ್ಮಿಕರಿಂದ ಗುತ್ತಿಗೆದಾರರು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆಗೆ, ಹೊರ ಗುತ್ತಿಗೆ ಆಧಾರದ ಮೇಲೆ ನಮಗೆ ಕಾರ್ಮಿಕರನ್ನು ಅವರು ಕೊಡುತ್ತಾರೆ. ಏಜೆನ್ಸಿಗೆ ನಾವು ಹಣ ಕೊಡುತ್ತೇವೆ. ಕಾರ್ಮಿಕರಿಂದ ಅವರು ಏಕೆ ಹಣ ವಸೂಲಿ ಮಾಡುತ್ತಾರೋ ಗೊತ್ತಿಲ್ಲ. ಈ ರೀತಿ ಮಾಡಬಾರದು. ಇದರ ಬಗ್ಗೆ ವಿಚಾರಿಸಿ ಕ್ರಮ ವಹಿಸುತ್ತೇನೆ ಎಂದು ಕೆ.ಜೆ.ಜಾರ್ಜ್ ಹೇಳಿದರು.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಘಟಕದ ಮುಖ್ಯ ಎಂಜಿನಿಯರ್ ಸೂರ್ಯಕಾಂತ್, ಘಟಕದ ಸುಪರಿಟೆಂಡೆಂಟ್ ಎಂಜಿನಿಯರ್ ಅನಿತಾ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ , ಬಿಡದಿ ಪುರಸಭೆ ಸದಸ್ಯ ಸಿ.ಉಮೇಶ್ ಮತ್ತಿತರರು ಹಾಜರಿದ್ದರು.ರಾಜಕೀಯ ಕಾರಣಕ್ಕಾಗಿ ವಿಪಕ್ಷಗಳಿಂದ ಕಮಿಷನ್ ಆರೋಪ:
ರಾಮನಗರ: ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದು ಗುತ್ತಿಗೆದಾರರು.ಆದರೀಗ ರಾಜಕೀಯ ಕಾರಣಕ್ಕಾಗಿ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ 60 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿವೆ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಮೇಲೆ 60 ಪರ್ಸೆಂಟ್ ಕಮಿಷನ್ ಆರೋಪವನ್ನು ಯಾರು ಮಾಡುತ್ತಿದ್ದಾರೆ ಅಂತ ನಿಮಗೂ ಗೊತ್ತು. ಈ ಹಿಂದೆ ಗುತ್ತಿಗೆದಾರರು ಅವರ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದನ್ನು ಮರೆತಿರಬೇಕು ಎಂದರು.ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಸಚಿವರು, ಏಕೆ ಡಿನ್ನರ್ ಕೊಡಬಾರಾದ. ಅದು ಅವರ ವೈಯಕ್ತಿಕ ವಿಚಾರ.
ನಾವು ನಾಲ್ಕು ಜನರನ್ನು ಊಟಕ್ಕೆ ಕರೆಯುತ್ತೇವೆ, ಅವರು ಬರುತ್ತಾರೆ.ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಡಿಸಿಎಂ ಇಲ್ಲ ಅಂತ ಊಟಕ್ಕೆ ಕರೆಯಬಾರಾದ. ಡಿಸಿಎಂ ಇದ್ದಾಗಲೂ ಊಟಕ್ಕೆ ಕರೆದಿದ್ದೇವೆ.
ಈ ಬಗ್ಗೆ ಡಿಸಿಎಂ ಕಂಪ್ಲೇಂಟ್ ಮಾಡಿದ್ದಾರಾ ಎಂದು ಪ್ರಶ್ನಿಸಿದರು.ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಹೈಕಮಾಂಡ್, ಬದಲಾವಣೆ ಮಾಡುವುದು ಕೂಡ ಹೈಕಮಾಂಡ್. ಈ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಇನ್ನು ಸಂಕ್ರಾಂತಿ ವೇಳೆಗೆ ಸಂಪುಟ ವಿಸ್ತರಣೆ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ವರಿಷ್ಠರು ಮಾಡುತ್ತಾರೆ ಎಂದು ಕೆ.ಜೆ.ಜಾರ್ಜ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.