Team that arrived for an investigation without prior notice turns back!

-ಪಂಚಮಸಾಲಿ ಪೀಠಕ್ಕೆ ಸರ್ಕಾರ ನೀಡಿದ್ದ ₹10 ಕೋಟಿ ಅನುದಾನ ದುರುಪಯೋಗ ಆರೋಪ।

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರದ ಪಂಚಮಸಾಲಿ ಪೀಠಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ ₹10 ಕೋಟಿ ಅನುದಾನ ದುರ್ಬಳಕೆ ಆರೋಪದ ಬಗ್ಗೆ ಯಾವುದೇ ಪೂರ್ವಾಪರ ಮಾಹಿತಿ ಇಲ್ಲದೇ, ನೋಟಿಸ್ ಸಹ ಕೊಡದೆ ಏಕಾಏಕಿ ತನಿಖೆಗೆ ಆಗಮಿಸಿದ್ದ ಅಧಿಕಾರಿಗಳನ್ನು ದೂರುದಾರರು-ಎದುರುದಾರರಿಬ್ಬರಿಗೂ ನೋಟಿಸ್ ನೀಡಿ, ದಾಖಲೆ ಸಮೇತ ವಾಸ್ತವ ಸ್ಥಿತಿ ಪರಿಶೀಲಿಸುವಂತೆ ತಿಳಿ ಹೇಳಿ, ವಾಪಸ್‌ ಕಳಿಸಿದ್ದಾಗಿ ಪೀಠದ ಉಚ್ಚಾಟಿತ ಆಡಳಿತಾಧಿಕಾರಿ ಡಾ.ರಾಜಕುಮಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಪೀಠಕ್ಕೆ ಸರ್ಕಾರದಿಂದ ಬಿಡುಗಡೆಯಾಗಿದ್ದ ₹10 ಕೋಟಿ ಅನುದಾನದ ದುರುಪಯೋಗ ಆರೋಪದ ಬಗ್ಗೆ ನಿಷ್ಪಕ್ಷಪಾತ ಹಾಗೂ ಸೂಕ್ತ ತನಿಖೆ ನಡೆಸುವಂತೆ ರಾಜ್ಯಪಾಲರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ರಾಜ್ಯಪಾಲರು, ಸಿಎಸ್‌ ಸೂಚನೆಯಂತೆ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು ಎಂದರು.

ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್‌ ಕಾರ್ಯ ಪಾಲಕ ಅಭಿಯಂತರರು ಶ್ರೀಮಠಕ್ಕೆ ತನಿಖೆಗೆ ಆಗಮಿಸಿದ್ದರು. ಆದರೆ, ದೂರುದಾರರು, ಎದುರುದಾರರಿಗೆ ಯಾವುದೇ ಪೂರ್ವಾಪರ ನೋಟಿಸ್ ಸಹ ಕೊಡದೇ, ಏಕಾಏಕಿ ತನಿಖೆಗೆ ಬಂದಿದ್ದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ವೇಳೆ ತಡೆದೆವು. ದೂರುದಾರರು, ಎದುರುದಾರರಿಬ್ಬರಿಗೂ ನೋಟಿಸ್ ನೀಡಿ, ಸೂಕ್ತ ದಾಖಲೆಗಳ ಸಮೇತವೇ ವಾಸ್ತವ ಸ್ಥಿತಿಯನ್ನು ಪರಿಶೀಲಿಸುವಂತೆ ಹೇಳಿ, ವಾಪಸ್‌ ಕಳಿಸಿದೆವು ಎಂದು ಹೇಳಿದರು.

ಕಾಟಾಚಾರಕ್ಕೆ ತನಿಖೆ ಮಾಡಿ, ಪ್ರಕರಣವನ್ನು ಮುಚ್ಚಿ ಹಾಕಲು ಅಧಿಕಾರಿಗಳು ಯತ್ನಿಸುತ್ತಿದ್ದಾರೇನೋ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಈ ಪ್ರಕರಣದ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಮಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬುದೇ ನಮ್ಮ ಒತ್ತಾಯ. 2021ನೇ ಸಾಲಿನಲ್ಲಿ ಕೇವಲ ಒಂದೂವರೆ ತಿಂಗಳಲ್ಲಿ ಒಟ್ಟು ₹10 ಕೋಟಿ ಅನುದಾನ ಹಂತ ಹಂತವಾಗಿ ಬಿಡುಗಡೆಯಾಗಿದೆ. ನಿಯಮಾನುಸಾರ ಕಟ್ಟಡ ನಿರ್ಮಾಣದ ವಿವಿಧ ಹಂತಗಳನ್ನು ಆದರಿಸಿ ಅನುದಾನ ಬಿಡುಗಡೆ ಮಾಡಬೇಕಾಗಿತ್ತು ಎಂದು ಅವರು ತಿಳಿಸಿದರು.

ಮೊದಲ ಹಂತದಲ್ಲಿ ಶೇ.25ರಷ್ಟು, ಎರಡನೇ ಹಂತದಲ್ಲಿ ಶೇ.50ರಷ್ಟು ಹಾಗೂ ಅಂತಿಮ ಹಂತದಲ್ಲಿ ಶೇ.25 ಅನುದಾನ ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಅಂತಹ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ, ಆಗಿನ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕೇವಲ 45 ದಿನಗಳಲ್ಲಿ ₹10 ಕೋಟಿ ಅನುದಾನ ಪಡೆಯಲಾಗಿದೆ. ಪೀಠದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ಕಟ್ಟಡವನ್ನೇ ಹೊಸದಾಗಿ ನಿರ್ಮಿಸಿರುವುದಾಗಿ ದಾಖಲೆಗಳಲ್ಲಿ ತೋರಿಸಿ, ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. 2016-17ರಿಂದಲೇ ಶ್ರೀಮಠದ ಲೆಕ್ಕಪತ್ರ, ಇನ್‌ಕಂ ಟ್ಯಾಕ್ಸ್‌ ಫೈಲಿಂಗ್, ಗೂಗಲ್ ಮ್ಯಾಪ್ ಇಮೇಜ್‌ಗಳಲ್ಲಿ ಈ ಕಟ್ಟಡ ಆಗಲೇ ಅಸ್ತಿತ್ವದಲ್ಲಿರುವುದು ಸ್ಪಷ್ಟವಾಗಿದೆ ಎಂದು ಅವರು ದೂರಿದರು.

ಅಲ್ಲದೇ, 2018ರಲ್ಲಿ ಶ್ರೀ ವಚನಾನಂದ ಸ್ವಾಮಿಗಳ ಪಟ್ಟಾಭಿಷೇಕದ ವೇಳೆಯೂ ಈ ಕಟ್ಟಡ ಇತ್ತು ಎಂಬುದಕ್ಕೆ ಆಗಿನ ಫೋಟೋ, ವೀಡಿಯೋಗಳ ಆದಾರದಿಂದಲೇ ಸ್ಪಷ್ಟವಾಗುತ್ತದೆ. ಆಡಿಯೋ ಅಥವಾ ವೀಡಿಯೋ ಮಾಹಿತಿ ಆಧಾರದ ಮೇಲೆ ಧರ್ಮರ್ಶಿಗಳು ಮೇಲಿನ ಆರೋಪಗಳು ಹಾಗೂ ಟ್ರಸ್ಟ್‌ನ ಆಡಳಿತದ ಕುರಿತಂತೆ ಸ್ಪಷ್ಟ ತನಿಖೆಯಾಗಲಿ. ಹಿಂದೆ ಹಣಕಾಸು ಅಧಿಕಾರವನ್ನು ಪ್ರಮುಖ ಧರ್ಮದರ್ಶಿಗಳಿಗೆ ನೀಡಿರುವ ಬಗ್ಗೆ ನಿರ್ಣಯ ಮಾಡಲಾಗಿದ್ದು, ಅದರಲ್ಲಿ ನಕಲಿಸಹ ಮಾಡಲಾಗಿದೆ. ಪೋರ್ಜರಿ ಸಹಿ ಬಗ್ಗೆ ಬಾಬಣ್ಣ ಎಂಬುವರು ಅಮೇರಿಕಾದಿಂದ ಮರಳಿದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಲಿದ್ದಾರೆ ಎಂದು ಅವರು ಹೇಳಿದರು.

ಶ್ರೀಮಠದ ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಫೌಂಡರ್ ಟ್ರಸ್ಟಿ ಹೊನ್ನಾಳಿ ಬಾಬಣ್ಣ, ಸಮಾಜದ ಪ್ರಮುಖರಾದ ಹನುಮಂತಪ್ಪ, ನಿಂಗಪ್ಪ ಇದ್ದರು.

ಬಾಕ್ಸ್...

ಕಟ್ಟಡ ಅಳತೆ, ವಿನ್ಯಾಸ, ಕಬ್ಬಿಣ ಬಳಕೆ ಲೆಕ್ಕ ವ್ಯತ್ಯಾಸ!

ಹರಿಹರದ ಪಂಚಮಸಾಲಿ ಪೀಠದ ಕಾಮಗಾರಿಗೆ ಸಂಬಂಧಿಸಿದಂತೆ ಕಟ್ಟಡದ ಅಳತೆ, ರಚನಾತ್ಮಕ ವಿನ್ಯಾಸ ಹಾಗೂ ಕಬ್ಬಿಣ ಬಳಕೆ ಲೆಕ್ಕಾಚಾರದಲ್ಲಿ ಭಾರೀ ವ್ಯತ್ಯಾಸವಿದ್ದು, 127 ಟನ್ ಕಬ್ಬಿಣ ಸಾಕಾಗುವಲ್ಲಿ 350 ಟನ್‌ಗೂ ಹೆಚ್ಚು ಕಬ್ಬಣ ಬಳಸಿರುವುದಾಗಿ ನಕಲಿ ಲೆಕ್ಕ ತೋರಿಸಲಾಗಿದೆ ಎಂದು ಶ್ರೀಮಠದ ಉಚ್ಚಾಟಿತ ಆಡಳಿತಾಧಿಕಾರಿ ಡಾ.ರಾಜಕುಮಾರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ಮೀಟರ್ ಎತ್ತರದ ಪಿಲ್ಲರ್‌ ನಿರ್ಮಾಣದ ವರದಿ, ದಾಖಲೆ ಸಂಪೂರ್ಣ ಬೋಗಸ್, ನಕಲಿಯಾಗಿವೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ₹10 ಕೋಟಿ ರು. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಥರ್ಡ್ ಪಾರ್ಟಿ ತಪಾಸಣೆ, ಎಂಬಿ ಇತ್ಯಾದಿ ಅಧಿಕೃತ ವರದಿಗಳಿಲ್ಲದೇ ಹಣ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಲಾಗಿದೆ ಎಂದರು.

4 ಜಿ ವಿನಾಯಿತಿಯಡಿ ಕಾಮಗಾರಿ ಕೈಗೊಂಡಿದ್ದರೂ, ನಿಯಮದ ಪ್ರಕಾರ ಸೂಕ್ತ ಪರಿಶೀಲನೆ ನಡೆದಿದೆಯೇ ಎಂಬ ಸಂಶಯ ವ್ಯಕ್ತಪಡಿಸಲಾಗಿದೆ. ಈ ಎಲ್ಲಾ ವಿಷಯದ ಕುರಿತಂತೆ ಸೂಕ್ತ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಲು ಸಿದ್ಧರಿದ್ದು, ರಾಜ್ಯ ಸರ್ಕಾರ, ಜಿಲ್ಲಾಡಳಿತವು ತಕ್ಷಣ ಮಧ್ಯಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ಮಾಡಿ, ಸತ್ಯ ಹೊರ ತರಲಿ ಎಂದು ಅವರು ಮನವಿ ಮಾಡಿದರು.

ಫೋಟೊ: 26ಕೆಡಿವಿಜಿ4, 5

ದಾವಣಗೆರೆಯಲ್ಲಿ ಹರಿಹರದ ಪಂಚಮಸಾಲಿ ಪೀಠದ ಉಚ್ಚಾಟಿತ ಆಡಳಿತಾಧಿಕಾರಿ ಡಾ.ರಾಜಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.