ಸಾರಾಂಶ
ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಜೆಡಿಯು, ತೆಲುಗು ದೇಶಂ ಪಕ್ಷಗಳು ಸೇರಿದಂತೆ ದೇಶದ ಎಲ್ಲಾ ಜನತೆ ತಿರಸ್ಕರಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ವಕ್ಫ್ ತಿದ್ದುಪಡಿ ಮಸೂದೆಯ ವಿರೋಧಿಸಿ, ಮಸೂದೆಯ ಪ್ರತಿಯನ್ನು ಹರಿದು ಹಾಕುವ ಮೂಲಕ ಎಸ್ ಡಿಪಿಐ ಪಕ್ಷದವರು ನಗರದ ಎಫ್ ಟಿಎಸ್ ವೃತ್ತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟಿಸಿದರು.ಈ ವೇಳೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಜೆಡಿಯು, ತೆಲುಗು ದೇಶಂ ಪಕ್ಷಗಳು ಸೇರಿದಂತೆ ದೇಶದ ಎಲ್ಲಾ ಜನತೆ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ದೇಶಾದ್ಯಂತ ಇರುವ ಎಲ್ಲಾ ವಕ್ಫ್ ಆಸ್ತಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಆಸ್ತಿಗಳಾಗಿವೆ. ಇವು ಯಾವುದೇ ರಾಜ್ಯಗಳ ಅಥವಾ ಕೇಂದ್ರ ಸರ್ಕಾರದ ಆಸ್ತಿಯಲ್ಲ. ಬಡ ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಳಿಗೆ ಇದೇ ಸಮುದಾಯದ ಮಹನೀಯರು ದಾನದ ರೂಪದಲ್ಲಿ ನೀಡಿದ ಆಸ್ತಿಯಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಕೇವಲ ತನ್ನ ಮುಸ್ಲಿಂ ದ್ವೇಷದಿಂದ ವಕ್ಫ್ ತಿದ್ದುಪಡಿಗೆ ಮುಂದಾಗಿದೆ ಎಂದು ಕಿಡಿಕಾರಿದರು.