ಬೀದರ್‌ನಲ್ಲಿ ಗುಟುಕು ನೀರಿಗಾಗಿ ನಿತ್ಯ ಶೋಷಿತರ ಕಣ್ಣೀರು

| Published : Apr 22 2025, 01:46 AM IST

ಸಾರಾಂಶ

ಶೋಷಣೆಗೆ ಮಿತಿಯೇ ಇಲ್ಲದಂತಾಗಿದೆ. ಇಲ್ಲಿಯ ದಲಿತರಿಗೆ ಕುಡಿಯುವ ನೀರಿಗೆ ಅಂಗಲಾಚುವ ದುಸ್ಥಿತಿ ಒಂದೆಡೆಯಾದರೆ ನಡೆದಾಡಲೂ ನೆಲವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯ ಬಿಸಿಲಲ್ಲಿ ದಲಿತರು ಬಸವಳಿದಿದ್ದಾರೆ. ಜಲಜೀವನ್‌ ಮಿಷನ್‌ಗಾಗಿ ತೋಡಿದ ಗುಂಡಿ ಜೀವ ಹಿಂಡುತ್ತಿದ್ದರೆ, ನೀರಿಗಾಗಿ ನಿತ್ಯ ಇವರು ಕಣ್ಣೀರು ಹರಿಸುವಂತಾಗಿದೆ.

ನಡೆದಾಡಲು ನೆಲವಿಲ್ಲದೆ ಚಿಕಪೇಟ್‌ನ ಬಡಾವಣೆಯಲ್ಲಿ ದಲಿತರ ಪರದಾಟ । ಡಿಸಿ, ಸಿಇಒ ಕಚೇರಿ ಅಲೆದರೂ ಕ್ರಮವಿಲ್ಲ

ಅಪ್ಪಾರಾವ್‌ ಸೌದಿ

ಕನ್ನಡಪ್ರಭ ವಾರ್ತೆ ಬೀದರ್‌

ಶೋಷಣೆಗೆ ಮಿತಿಯೇ ಇಲ್ಲದಂತಾಗಿದೆ. ಇಲ್ಲಿಯ ದಲಿತರಿಗೆ ಕುಡಿಯುವ ನೀರಿಗೆ ಅಂಗಲಾಚುವ ದುಸ್ಥಿತಿ ಒಂದೆಡೆಯಾದರೆ ನಡೆದಾಡಲೂ ನೆಲವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯ ಬಿಸಿಲಲ್ಲಿ ದಲಿತರು ಬಸವಳಿದಿದ್ದಾರೆ. ಜಲಜೀವನ್‌ ಮಿಷನ್‌ಗಾಗಿ ತೋಡಿದ ಗುಂಡಿ ಜೀವ ಹಿಂಡುತ್ತಿದ್ದರೆ, ನೀರಿಗಾಗಿ ನಿತ್ಯ ಇವರು ಕಣ್ಣೀರು ಹರಿಸುವಂತಾಗಿದೆ.

ಇದೇನು ದೂರದ ಗುಡ್ಡದ ಪ್ರದೇಶದಲ್ಲಿಲ್ಲ ಅಥವಾ ದೂರದೂರಲ್ಲ. ಜಿಲ್ಲಾ ಕೇಂದ್ರ ಬೀದರ್‌ಗೆ ಹೊಂದಿಕೊಂಡಿರುವ ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ತೆರಳಬಹುದಾದ ಮರಕಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಚಿಕಪೇಟ್‌ ಗ್ರಾಮದ ಸರ್ವೇ ನಂ. 21ರಲ್ಲಿ ಶೋಷಿತ ಸಮುದಾಯದ 14ರಿಂದ 15 ಕುಟುಂಬಗಳ 75ಕ್ಕೂ ಹೆಚ್ಚು ಜನ ವಾಸಿಸುತ್ತಿರುವ ಬಡಾವಣೆ ಇದಾಗಿದೆ.

ಹಲವು ತಿಂಗಳುಗಳ ಹಿಂದೆಯೇ ಜೆಜೆಎಂ ಯೋಜನೆ ಮಂಜೂರಾಗಿ ನೀರಿನ ಪೈಪ್‌ಲೈನ್‌ ಅಳವಡಿಕೆಗೆ ಗುಂಡಿ ತೋಡಲಾಗಿದೆ. ಕೆಲ ತಕರಾರುಗಳ ಹಿನ್ನೆಲೆಯನ್ನು ಪರಿಶೀಲಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಿಸಿದವರಿಗೆ ಸೂಚನೆ ನೀಡಿದ್ದರಾದರೂ ಅದು ಇನ್ನೂ ಕಾರ್ಯಗತವಾಗಿಲ್ಲ.

ಮನೆಯಾಚೆ ತೆರಳಲು ಉದ್ದ ಜಿಗಿತ ಮಾಡಬೇಕು:

ಮನೆಯಲ್ಲಿರುವ ಮಹಿಳೆಯರಷ್ಟೇ ಅಲ್ಲ ಚಿಕ್ಕ ಮಕ್ಕಳೂ ಗುಟುಕು ನೀರಿಗಾಗಿ ನೀರಿನ ಕೊಡ ಹಿಡಿದುಕೊಂಡು ದೂರ ದೂರಕ್ಕೆ ಹೋಗಿ ಬರುವ ಅನಿವಾರ್ಯತೆ ಇದೆ. ಇದರೊಟ್ಟಿಗೆ ಹಲವು ತಿಂಗಳ ಹಿಂದೆಯೇ ಪೈಪ್‌ಲೈನ್‌ ಕಾಮಗಾರಿಗಾಗಿ ತೋಡಲಾದ ಗುಂಡಿಯಲ್ಲಿ ಹೂಳು ತುಂಬಿ ಸೊಳ್ಳೆಗಳ ತಾಣವಾಗಿ ಅನಾರೋಗ್ಯವನ್ನು ಕೈಬೀಸಿ ಕರೆಯುತ್ತಿವೆ. ಮನೆಯಿಂದ ಆಚೆ ಹೋಗಬೇಕಾದರೆ ನಿತ್ಯ ಉದ್ದ ಜಿಗಿತ ಮಾಡಿಯೇ ಸಾಗಬೇಕಾಗಿದೆ.

ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ, ಗಂಭೀರವಾಗಲಿ. ಜಿಲ್ಲಾ ಕೇಂದ್ರಕ್ಕೆ ಕೂಗಳತೆಯ ದೂರದಲ್ಲಿದ್ದರೂ ಗುಟುಕು ನೀರಿಗೆ ಪರದಾಡುತ್ತಿರುವ ಶೋಷಿತ ಸಮುದಾಯದ ಜನರಿಗೆ ತಕ್ಷಣವೇ ಕುಡಿಯುವ ನೀರು ಪೂರೈಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ದಲಿತರು ಒತ್ತಾಯಿಸಿದ್ದಾರೆ

ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆಲ್ಲ ಸಮಸ್ಯೆಯ ಆಳವನ್ನು ತಿಳಿಸಿದರೂ ಇನ್ನೂ ಗುಟುಕು ನೀರು ದಕ್ಕಿಲ್ಲ. ಅಷ್ಟಕ್ಕೂ ಈ ಎಲ್ಲ ಹಿರಿಯ ಅಧಿಕಾರಿಗಳು ತಕ್ಷಣ ಪೊಲೀಸ್‌ ರಕ್ಷಣೆಯಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ಸದರಿ ಮನೆಗಳಿಗೆ ನೀರು ಹರಿಸುವಂತೆ ಕ್ರಮ ಕೈಗೊಳ್ಳುವಂತೆ ಕಡತ ಮಂಡಿಸಿದ್ದರೂ ಅದಕ್ಕೆ ಕೆಳ ಹಂತದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಪ್ರದೀಪ ಜಂಝೀರೆ, ಜಿಲ್ಲಾಧ್ಯಕ್ಷ, ದಲಿತ ಛಲವಾದಿ ಮಹಾಸಭಾ, ಬೀದರ್‌.