ಕನ್ನಡಪ್ರಭ ವಾರ್ತೆ ಹಾಸನನಗರದ ರಾಜೀವ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇ‌ನ್ಫರ್‌ಮೇಷನ್‌ ಸೈನ್ಸ್‌ ವಿಭಾಗದಿಂದ “TECK SUTRA” ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮವು ವಿದ್ಯಾರ್ಥಿಗಳ ಕೌಶಲ್ಯಗಳ ಅನಾವರಣಕ್ಕೆ ಒಂದು ವೇದಿಕೆಯಾಗಿತ್ತು.ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್‌ ಪಿ.ಕೆ ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಆಲೋಚನೆಗಳಿಂದ ಕೆಲವೊಂದು ತಾಂತ್ರಿಕ ಕೌಶಲ್ಯತೆಯಲ್ಲಿ ನಿಪುಣತೆ ಸಾಧಿಸಿ ಆ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ತಿಳಿಸಿದರು. ಈ ಕಾ‍ರ್ಯಕ್ರಮಕ್ಕೆ ವಿವಿಧ ಕಾಲೇಜುಗಳಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮಲ್ಲಿರುವ ಕೌಶಲ್ಯಗಳನ್ನು ಪ್ರದರ್ಶಿಸುವುದರ ಜೊತೆಗೆ ಬೇರೆ ವಿದ್ಯಾರ್ಥಿಗಳು ಮಾಡಿರುವ ತಾಂತ್ರಿಕ ಕೌಶಲ್ಯ ವಿಷಯಗಳ ಬಗ್ಗೆ ತಿಳಿದುಕೊಂಡರು. ಅಂತಿಮವಾಗಿ ಉತ್ತಮ ಪ್ರಬಂಧಗಳನ್ನು ಮಂಡಿಸಿದಂತಹ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ IQAC ನಿರ್ದೇಶಕರಾದ ಡಾ. ಎಚ್.‌ ಎಸ್. ಮೋಹವ್, ಡೀನ್‌ ಅಕಾಡೆಮಿಕ್‌ ಡಾ. ರಾಮಮೂರ್ತಿ ಡಿ, ಇ‌ನ್ಫರ್‌ಮೇಷನ್‌ ಸೈನ್ಸ್‌ ವಿಭಾಗದ ಮುಖ್ಯಸ್ಥರಾದ ಡಾ. ಪ್ರತಿಭಾ ಜಿ, ಕಾರ್ಯಕ್ರಮದ ಸಂಯೋಜಕರಾದ ಸಹನಾ. ಆರ್.‌ ಎಸ್.‌, ಮಹದೇವಮ್ಮ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವೃಂದದವರು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು.