ಸುಮಾರು ₹20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ದಂಪತಿ ಮತ್ತು ನಗರದ ಪಾಲಿಕೆ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಟೆಕ್ಕಿಯೊಬ್ಬರು ಡೆತ್‌ನೋಟ್‌ ಬರೆದಿಟ್ಟು, ನಿರ್ಮಾಣ ಹಂತದ ಕಟ್ಟಡದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಸುಮಾರು ₹20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ದಂಪತಿ ಮತ್ತು ನಗರದ ಪಾಲಿಕೆ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಟೆಕ್ಕಿಯೊಬ್ಬರು ಡೆತ್‌ನೋಟ್‌ ಬರೆದಿಟ್ಟು, ನಿರ್ಮಾಣ ಹಂತದ ಕಟ್ಟಡದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೈಟ್‌ಫೀಲ್ಡ್‌ನ ಬ್ರೂಕ್‌ಬಾಂಗ್ ಲೇಔಟ್‌ನ ನಿವಾಸಿ ಮುರುಳಿ ಗೋವಿಂದರಾಜು (45) ಆತ್ಮಹತ್ಯೆ ಮಾಡಿಕೊಂಡವರು. ಈ ಸಂಬಂಧ ಮುರುಳಿ ಅವರ ತಾಯಿ ಲಕ್ಷ್ಮಿ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಶಶಿ ನಂಬಿಯಾರ್‌ (64) ಮತ್ತು ಉಷಾ ನಂಬಿಯಾರ್‌ (57) ದಂಪತಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವರುಣ್‌ ನಂಬಿಯಾರ್‌ಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಟಿಪಿಎಲ್‌ನಲ್ಲಿ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಬುಧವಾರ ಬೆಳಿಗ್ಗೆ ನಲ್ಲೂರಹಳ್ಳಿನಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಛಾವಣಿಯ ಉಕ್ಕಿಗೆ ನೇಣು ಬಿಗಿದುಕೊಂಡಿದ್ದಾರೆ. ಕಾರ್ಪೆಂಟರ್‌ ಗಣೇಶ ಎಂಬುವರು ಕೆಲಸ ಮಾಡಲು ಬುಧವಾರ ಬೆಳಗ್ಗೆ 9.30ಕ್ಕೆ ಕಟ್ಟಡ ಪ್ರವೇಶಿಸಿದ್ದಾಗ ನೇಣುಬಿಗಿದ ಸ್ಥಿತಿಯಲ್ಲಿ ಮುರುಳಿ ಕಂಡು ಬಂದಿದ್ದು, ಕೂಡಲೇ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ವೈಟ್‌ಫೀಲ್ಡ್‌ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?:

ನನ್ನ ಮಗ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿರುವಾಗ ನಲ್ಲೂರಹಳ್ಳಿಯ ಶಿವನ ದೇವಾಲಯದ ಹಿಂಬದಿ ಇರುವ ಲೇಔಟ್‌ನಲ್ಲಿ ಉಷಾ ನಂಬಿಯಾರ್‌ ಮತ್ತು ಶಶಿ ನಂಬಿಯಾರ್ ಅವರ ಸಂಬಂಧಿ ಬಳಿ 2018ರಲ್ಲಿ ನಿವೇಶನ ಖರೀದಿ ಮಾಡಿದ್ದ. ಆ ನಿವೇಶದಲ್ಲಿ ಕಟ್ಟಡ ಕಟ್ಟಲು ಪ್ರಾರಂಭಿಸಿದ್ದ. ಆದರೆ ಅ.25ರಿಂದಲೂ ಉಷಾ ಮತ್ತು ಶಶಿ ವಿನಾಕಾರಣ ನನ್ನ ಮಗನ ಕಟ್ಟದ ಬಳಿ ಹಲವು ಸಾರಿ ಬಂದು ಸುಮಾರು ₹20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಮಾನಸಿಕ ಹಿಂಸೆ ನೀಡುತ್ತಿದ್ದರು. ಬುಧವಾರ ಹಣ ಕೊಡಲೇಬೇಕು ಎಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ಮುರುಳಿ ನನ್ನ ಬಳಿ ಹೇಳಿಕೊಂಡಿದ್ದ. ಇದೇ ನೋವಿನಲ್ಲಿ ಬುಧವಾರ ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋಗಿ ನಿರ್ಮಾಣ ಹಂತದ ಕಟ್ಟಡದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮುರುಳಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿ, ಮಾನಸಿಕ ಹಿಂಸೆ ನೀಡಿದ್ದ ಉಷಾ ಮತ್ತು ಶಶಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಮುರುಳಿ ತಾಯಿ ಲಕ್ಷ್ಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

10 ಪುಟಗಳ ಡೆತ್‌ನೋಟ್‌ ಪತ್ತೆ:

ಮುರುಳಿ ಸಾವಿಗೂ ಮುನ್ನ ಉಷಾ, ಶಶಿ ದಂಪತಿ ಹಾಗೂ ನಗರ ಪಾಲಿಕೆಯ ಅಧಿಕಾರಿಗಳ ಕಿರುಕುಳದ ಬಗ್ಗೆ 10 ಪುಟಗಳ ಡೆತ್‌ನೋಟ್‌ ಬರೆದಿದ್ದಾರೆ. ನನ್ನ ಸಾವಿಗೆ ಉಷಾ, ಶಶಿ ಮತ್ತು ಅವರ ಮಗ ವರುಣ್ ನಂಬಿಯಾರ್ ಅವರೇ ಕಾರಣ. ಅವರು ನನ್ನನ್ನು ಆಸ್ತಿ ಸಮಸ್ಯೆಯಲ್ಲಿ ಸಿಲುಕಿಸಿ, ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ನಾವು ಗೌರವಯುತವಾಗಿ ಬಾಳುತ್ತಿದ್ದೇವು. ನಮ್ಮ ಕುಟುಂಬದಲ್ಲಿ ಯಾರೊಬ್ಬರು ಪೊಲೀಸ್ ಠಾಣೆಗೆ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತಿರಲಿಲ್ಲ. ಆದರೆ, ಉಷಾ ಮತ್ತು ಶಶಿ ನನ್ನನ್ನು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದರು. ನನ್ನ ಕುಟುಂಬದ ಗೌರವವನ್ನು ಹಾಳು ಮಾಡಿದರು. ನನ್ನ ಸಾವು ಮತ್ತು ನನ್ನ ಕುಟುಂಬದ ಅವನತಿಗೆ ಆ ದಂಪತಿಯೇ ಕಾರಣ ಎಂದು ಆಪಾದಿಸಿದ್ದಾರೆ.

ಪಾಲಿಕೆ ಅಧಿಕಾರಿಗಳಿಂದ

ನೋಟಿಸ್ ಕೊಡಿಸಿ ಬೆದರಿಕೆ

ಉಷಾ ನಂಬಿಯಾರ್ ವೈಟ್‌ಫೀಲ್ಡ್ ಸುತ್ತಮುತ್ತ ಹೊಸದಾಗಿ ಕಟ್ಟುವ ಕಟ್ಟಡ ಹಾಗೂ ಲೇಔಟ್‌ಗಳಲ್ಲಿನ ಮಾಲೀಕರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಳು. ಹಣಕೊಡದೇ ಇದ್ದಾಗ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದು ಹಾಗೂ ಪಾಲಿಕೆ ಅಧಿಕಾರಿಗಳಿಂದ ನೋಟಿಸ್ ಕೊಡಿಸಿ ಮನೆ ಮಾಲೀಕರಿಗೆ ಕಿರುಕುಳ ನೀಡಿ ಬೆದರಿಸುತ್ತಿದ್ದಳು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಉಷಾ ದಂಪತಿಯಿಂದ ಯಾರಾದರೂ ಕಿರುಕುಳ ಅಥವಾ ಹಿಂಸೆಗೆ ಒಳಗಾಗಿದ್ದರೆ ಅಂಥವರು ಪೊಲೀಸ್‌ ಠಾಣೆಗೆ ಬಂದು ದೂರು ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ನನ್ನ ಇಡೀ ಜೀವನದ ಸಂಪಾದನೆಯನ್ನು ಈ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದೆ. ಇವರ ಕಿರುಕುಳದಿಂದ ನಾನು ಕೆಲಸವನ್ನು ತೊರೆದೆ. ನನ್ನ ಆರ್ಥಿಕ ಹೊರೆ ಹೆಚ್ಚಾಯಿತು. ನನ್ನ ಆಸ್ತಿ ಮತ್ತು ಇತರ ಸಂಪಾದನೆ ನನ್ನ ತಾಯಿಗೆ ಹೋಗಬೇಕು. ಅವರ ಮರಣದ ನಂತರ ಅದನ್ನು ಮಕ್ಕಳಿಗೆ ವರ್ಗಾಯಿಸಬೇಕು ಎಂದು ಮುರುಳಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.