ತಾಂತ್ರಿಕ ತೊಂದರೆ: ಹರಾಜು ಪ್ರಕ್ರಿಯೆ ಕೈಬಿಟ್ಟ ಹುಡಾ

| Published : Oct 25 2024, 01:12 AM IST / Updated: Oct 25 2024, 01:13 AM IST

ಸಾರಾಂಶ

ಮೂಲೆ ಹಾಗೂ ಬಿಡಿ ನಿವೇಶನಗಳ ಇ -ಹರಾಜು ಪ್ರಕ್ರಿಯೆ ಅ. 2ರಿಂದ ಪ್ರಾರಂಭವಾಗಿತ್ತು. ಪತ್ರಿಕಾ ಪ್ರಕಟಣೆಗಳಲ್ಲಿ ಅ. 25 ಕೊನೆ ದಿನಾಂಕವಾಗಿತ್ತು. ಆದರೆ ಅ. 23ರಂದೇ ಸಾಫ್ಟ್‌ವೇರ್‌ನಲ್ಲಿ ಕೊನೆ ದಿನ ಎಂದು ತೋರಿಸಿ 23ಕ್ಕೆ ಸಾಫ್ಟ್‌ವೇರ್‌ ಸ್ಥಗಿತವಾಗಿತ್ತು.

ಹುಬ್ಬಳ್ಳಿ:

ಸಾಫ್ಟ್‌ವೇರ್‌ನಲ್ಲಿ ಕಂಡು ಬಂದ ತಾಂತ್ರಿಕ ತೊಂದರೆಯಿಂದಾಗಿ ಹುಡಾ ಅಭಿವೃದ್ಧಿಪಡಿಸಿರುವ ಬಡಾವಣೆಗಳ ಮೂಲೆ ನಿವೇಶನ/ ಬಿಡಿ ನಿವೇಶನಗಳ ಇ- ಹರಾಜು ಪ್ರಕ್ರಿಯೆಯನ್ನು ಕೈ ಬಿಡಲಾಗಿದ್ದು, ಪ್ರಕ್ರಿಯೆ ಪುನಾರಂಭಿಸಲಾಗುವುದು. ಅದರ ದಿನಾಂಕ ನಂತರ ತಿಳಿಸಲಾಗುವುದು ಎಂದು ಹುಡಾ ತಿಳಿಸಿದೆ.

ಲಕಮ್ಮನಹಳ್ಳಿ, ತಡಸಿನಕೊಪ್ಪ, ಭೈರಿದೇವರಕೊಪ್ಪದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ಈ ಬಡಾವಣೆಗಳಲ್ಲಿನ ಮೂಲೆ ಹಾಗೂ ಬಿಡಿ ನಿವೇಶನಗಳ ಇ -ಹರಾಜು ಪ್ರಕ್ರಿಯೆ ಅ. 2ರಿಂದ ಪ್ರಾರಂಭವಾಗಿತ್ತು. ಪತ್ರಿಕಾ ಪ್ರಕಟಣೆಗಳಲ್ಲಿ ಅ. 25 ಕೊನೆ ದಿನಾಂಕವಾಗಿತ್ತು. ಆದರೆ ಅ. 23ರಂದೇ ಸಾಫ್ಟ್‌ವೇರ್‌ನಲ್ಲಿ ಕೊನೆ ದಿನ ಎಂದು ತೋರಿಸಿ 23ಕ್ಕೆ ಸಾಫ್ಟ್‌ವೇರ್‌ ಸ್ಥಗಿತವಾಗಿತ್ತು. ಇದು ತಾಂತ್ರಿಕ ತೊಂದರೆಯಿಂದ ಆಗಿರುವಂತಹದ್ದು. ಆದಕಾರಣ ಸದ್ಯ ನಡೆದಿರುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು. ಈವರೆಗೆ ಇ-ಹರಾಜಿನಲ್ಲಿ ನೋಂದಣಿ ಮಾಡಿ ಇಎಂಡಿ ಹಣ ತುಂಬಿದವರಿಗೆ ಆ ಹಣವನ್ನು ಮರಳಿ ನೀಡಲಾಗುವುದು.

ನಂತರ ಮತ್ತೊಮ್ಮೆ ಹೊಸದಾಗಿಯೇ ಇ-ಹರಾಜು ಪ್ರಕ್ರಿಯೆ ಪ್ರಾರಂಭಿಸಲು ಹುಡಾ ನಿರ್ಧರಿಸಿದೆ.ಈ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಹುಡಾ ಅಧ್ಯಕ್ಷ ಶಾಕೀರ ಸನದಿ, ತಾಂತ್ರಿಕ ತೊಂದರೆಯಿಂದಾಗಿ 2 ದಿನ ಮುಂಚಿತವಾಗಿ ಸಾಫ್ಟ್‌ವೇರ್‌ನಲ್ಲಿ ನೋಂದಣಿ ಕಾರ್ಯಕ್ರಮ ಸ್ಥಗಿತವಾಗಿ ಈ ಹಿನ್ನೆಲೆಯಲ್ಲಿ ಈ ಇಡೀ ಪ್ರಕ್ರಿಯೆಯನ್ನು ಕೈ ಬಿಡಲಾಗಿದೆ. ಮುಂದೆ ಪುನಃ ಹೊಸದಾಗಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಅಲ್ಲದೇ ಈಗಾಗಲೇ ನೋಂದಣಿ ಮಾಡಿ ದುಡ್ಡು ಕಟ್ಟಿದವರಿಗೆ ನಾಲ್ಕೈದು ದಿನಗಳಲ್ಲಿ ಹಣವನ್ನು ವಾಪಸ್‌ ನೀಡಲಾಗುವುದು ಎಂದು ತಿಳಿಸಿದ್ದಾರೆ.