ಪಲ್ಲಾಗಟ್ಟೆ ಆಸ್ಪತ್ರೆಯಲ್ಲಿ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಶ್ಲಾಘನೀಯ

| Published : Feb 11 2025, 12:50 AM IST

ಪಲ್ಲಾಗಟ್ಟೆ ಆಸ್ಪತ್ರೆಯಲ್ಲಿ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಶ್ಲಾಘನೀಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲೇ ಮಹತ್ವದ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ನೀಡುವ ವಿಧಾನ ಆರಂಭಿಸಿದ ತರಳಬಾಳು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರ ದೂರದೃಷ್ಟಿಗೆ ನಾನು ಆಭಾರಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ವರ್ಚುವಲ್ ಮೂಲಕ ಚಿಕಿತ್ಸೆ ಕಾರ್ಯಕ್ರಮಕ್ಕೆ ಚಾಲನೆ

- - - ಕನ್ನಡಪ್ರಭ ವಾರ್ತೆ ಜಗಳೂರು

ರಾಜ್ಯದಲ್ಲೇ ಮಹತ್ವದ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ನೀಡುವ ವಿಧಾನ ಆರಂಭಿಸಿದ ತರಳಬಾಳು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರ ದೂರದೃಷ್ಟಿಗೆ ನಾನು ಆಭಾರಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಪಲ್ಲಾಗಟ್ಟೆ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಸೋಮವಾರ ಕೇಂದ್ರ-ರಾಜ್ಯ ಸರ್ಕಾರಗಳು, ಸಿರಿಗೆರೆಯ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಟೆಸ್ಲಾನ್ ಟೆಕ್ನಾಲಜೀಸ್, ಸರ್ಜಿ ಹೈಟೆಕ್ ಆಸ್ಪತ್ರೆ ಆಶ್ರಯದಲ್ಲಿ ತಾಲೂಕಿನ ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಗಂಭೀರ ಸಮಸ್ಯೆಗಳಾದ ಕ್ಯಾನ್ಸರ್, ಸ್ತ್ರೀರೋಗ ಸಂಬಂಧಿ ಸಮಸ್ಯೆಗಳು ಸೇರಿದಂತೆ ಅನೇಕ ರೋಗಗಳಿಗೆ ತಜ್ಞವೈದ್ಯರಿಂದ ವರ್ಚುವಲ್ ಮೂಲಕ ರೋಗಿಗೆ ಚಿಕಿತ್ಸೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀಗಳು ಕೆರೆಗಳಿಗೆ ನೀರುಹರಿಸಿ ಬಂಗಾರದ ನಾಡನ್ನಾಗಿಸಿದ್ದಾರೆ. ಈಗ ಮತ್ತೊಂದು ಹೆಜ್ಜೆ ಆರೋಗ್ಯದ ಕಡೆಗೆ ಕಾಳಜಿ ತೋರಿಸುವ ಕಾರ್ಯ. ಇದಕ್ಕೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು. ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬೆಂಗಳೂರು ಮತ್ತು ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ವೈದ್ಯರು ಇಲ್ಲಿನ ವೈದ್ಯರಿಗೆ ವರ್ಚುವಲ್ ಮೂಲಕ ನಿರ್ದೇಶನ ನೀಡಿ, ರೋಗಿಯ ಪ್ರಾಣ ಉಳಿಸುವ ಆಧುನಿಕ ತಂತ್ರಜ್ಞಾನದ ವಿಧಾನ ಕಾರ್ಯಗತಗೊಂಡಿರುವುದು ಶ್ಲಾಘನೀಯ ಎಂದರು.

ಯೋಜನಾ ಆಯೋಗದ ಮಾಜಿ ಸದಸ್ಯ ಹಾಗೂ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಡಾ. ಕೆ.ಪಿ. ಬಸವರಾಜಪ್ಪ ಮಾತನಾಡಿ, ದಾವಣಗೆರೆ ಎಸ್ಎಸ್ ಆಸ್ಪತ್ರೆ, ಶಿವಮೊಗ್ಗದ ಸರ್ಜಿ ಆಸ್ಪತ್ರೆಗಳ ಸಮೂಹ ವೈದ್ಯರನ್ನು ಒಳಗೊಂಡು ವರ್ಚುವಲ್ ಮೂಲಕ ರೋಗಿಗೆ ಪ್ರಾಥಮಿಕ ಕೇಂದ್ರಗಳಲ್ಲೇ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ತರಳಬಾಳು ಶ್ರೀಗಳ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪಿಸಲಾಗಿದೆ. ನಿರ್ದಿಷ್ಟ ಕಾಯಿಲೆಗಳಿಗೆ ಆಸ್ಪತ್ರೆಯ ವೈದ್ಯರು ಭಾರತ್ ಇಂಟರ್ನೆಟ್ ವ್ಯವಸ್ಥೆಯ ಮೂಲಕ ತಮ್ಮ ಗ್ರಾಮದಲ್ಲೇ ಚಿಕಿತ್ಸೆ ಪಡೆಯುವಂತಹ ವಿನೂತನ ವ್ಯವಸ್ಥೆ ಇದಾಗಿದೆ. ದಾನಿಗಳಾದ ಕೆಂಚಮ್ಮನಹಳ್ಳಿ ವೈ.ಕೆ. ಬಸವರಾಜಪ್ಪ ಮತ್ತು ಜಿಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್ ₹10 ಲಕ್ಷ ನೆರವು ನೀಡಿದ್ದಾರೆ. ಒಟ್ಟಾರೆ ಈ ತಂತ್ರಜ್ಞಾನಕ್ಕೆ ₹40 ಲಕ್ಷ ಖರ್ಚಾಗಿದೆ ಎಂದು ತಿಳಿಸಿದರು.

ದಾನಿ ವೈ.ಕೆ.ಬಸವರಾಜಪ್ಪ, ಡಿಎಚ್ಒ ಡಾ.ಷಣ್ಮುಖಪ್ಪ, ವಿಷಯ ತಜ್ಞ ಕೆವಿಕೆ ವಿಜ್ಞಾನಿ ಡಾ. ಎಂ.ಜಿ. ಬಸವನಗೌಡ, ಡಾ.ಅರವಿಂದ್, ಎಚ್.ಎಸ್.ರಾಘವೇಂದ್ರ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಗುರುಮೂರ್ತಿ, ಎಸ್.ಕೆ. ಮಂಜುನಾಥ್, ವಿಜ್ಞಾನಿಗಳಾದ ಜೆ.ರಘುರಾಜ, ಡಾ.ಸುಪ್ರಿಯಾ. ಟಿಎಚ್ಒ ಡಾ.ವಿಶ್ವನಾಥ್, ಪಲ್ಲಾಗಟ್ಟೆ ವೈದ್ಯ ಡಾ.ಬಸವಂತ್ ಇದ್ದರು.

- - - -10ಜೆಜಿಎಲ್2:

ಜಗಳೂರು ತಾಲೂಕಿನ ಪಲ್ಲಾಗಟ್ಟೆಯಲ್ಲಿ ವರ್ಚುವಲ್ ಮೂಲಕ ಗಂಭೀರ ಸಮಸ್ಯೆಗಳ ರೋಗಿಗಳಿಗೆ ತಜ್ಞವೈದ್ಯರಿಂದ ಚಿಕಿತ್ಸೆ ಕಲ್ಪಿಸುವ ವ್ಯವಸ್ಥೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.