ಕೃಷಿ ವಲಯದಲ್ಲಿ ತಾಂತ್ರಿಕತೆಯ ಅವಶ್ಯವಿದೆ: ಎಸ್‌.ಎನ್‌.ಝಾ

| Published : Mar 01 2024, 02:19 AM IST

ಸಾರಾಂಶ

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನಡೆದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ನವದೆಹಲಿಯ ಐಸಿಎಆರ್‌ ನ ತಾಂತ್ರಿಕ ವಿಭಾಗದ ಉಪ ಮಹಾನಿರ್ದೇಶಕ ಡಾ.ಎಸ್.ಎನ್ ಝಾ ಅವರು ಘಟಿಕೋತ್ಸವದ ಭಾಷಣೆಯನ್ನು ಮಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕ್ಷೀಣಿಸುತ್ತಿರುವ ಕೃಷಿ ವಲಯದ ಮೇಲಿನ ಆಸಕ್ತಿ ಮತ್ತೆ ವೃದ್ಧಿಸುವ ಅಗತ್ಯವಿದ್ದು ಆ ನಿಟ್ಟಿನಲ್ಲಿ ತಾಂತ್ರಿಕತೆಯನ್ನು ಹೆಚ್ಚಾಗಿ ಬಳಸಿಕೊಂಡು ಪ್ರಗತಿ ಸಾಧಿಸಬೇಕಾಗಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ (ಐಸಿಎಆರ್)ನ ತಾಂತ್ರಿಕ ವಿಭಾಗದ ಉಪ ಮಹಾನಿರ್ದೇಶಕ ಡಾ.ಎಸ್.ಎನ್ ಝಾ ಹೇಳಿದರು.

ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಗುರುವಾರ ಜರುಗಿದ 13ನೇ ಘಟಿಕೋತ್ಸವ ಸಮಾರಂಭದ ಘಟಿಕೋತ್ಸವದ ಭಾಷಣೆಯಲ್ಲಿ ಮಾತನಾಡಿದ ಅವರು, ಸಂಘರ್ಷ, ಹವಮಾನ ವೈಪರೀತ್ಯ ಹಾಗೂ ಕೊರೋನಾದಂತಹ ಮಹಾಮಾರಿಗಳಿಂದಾಗಿ ಆಹಾರ ಉತ್ಪಾದನೆ, ಸರಬರಾಜು ಸೇರಿದಂತೆ ಸಾಮಾನ್ಯ ಜೀವನ ವ್ಯವಸ್ಥೆಯ ಸರಪಳಿ ಸರಿದಿದೆ. ಇದರಿಂದಾಗಿ ಕೃಷಿ ವಲಯದಲ್ಲಿ ದುಡಿಯುವ ರೈತರ ಸಂಖ್ಯೆ ಕಡಿಮೆಯಾಗಿದೆ, ಸಂಪ್ರದಾಯಿಕ ಕೃಷಿ ಪದ್ಧತಿಯನ್ನು ಯುವಕರು ನಿರಾಕರಿಸುತ್ತಿದ್ದಾರೆ. ದೇಶದಲ್ಲಿ 1991 ರಲ್ಲಿ ಶೇ.59.1 ರಷ್ಟು ಇದ್ದಂತಹ ಕೃಷಿ ಕಾರ್ಮಿಕರ ಪ್ರಮಾಣವು 2011 ರ ವೇಳೆಗೆ ಶೇ.54.6 ಕ್ಕೆ ಇಳಿದಿದ್ದು 2021 ಕ್ಕೆ ಈ ಸಂಖ್ಯೆಯು 39.4 ನ್ನು ದಾಟಿದೆ. ಕೃಷಿ ವಲಯದಲ್ಲಿ 1972 ರಲ್ಲಿ 78.42 ದಶಲಕ್ಷ ಜಾನುವಾರಗಳನ್ನು ಕೃಷಿಯಲ್ಲಿ ಬಳಸಿಕೊಳ್ಳಲಾಗುತ್ತಿದ್ದು ಇದೀಗ 2019 ಕ್ಕೆ ಜಾನುವಾರುಗಳ ಬಳಕೆಯು ಕೇವಲ 38.74 ಕ್ಕೆ ಬಂದಿಳಿದಿದೆ. ಹೀಗೆ ಕೃಷಿ ಕಾರ್ಮಿಕರು ಹಾಗೂ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದ್ದರಿಂದ ಭೂಮಿ ಹಿಡುವಳಿ,ಆಹಾರ ಉತ್ಪನ್ನ ವೃದ್ಧಿಯಲ್ಲಿ ವ್ಯತ್ಯೇಯ ಉಂಟಾಗುತ್ತಿದ್ದು ಇದು ಕೃಷಿಯನ್ನು ಲಾಭದಾಯಕವನ್ನಾಗಿಸುವ ಪ್ರಯತ್ನಕ್ಕೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಇಂತಹ ಸಮಯದಲ್ಲಿ ದೇಶದ ಕೃಷಿ ವಲಯದ ಅಭಿವೃದ್ಧಿಗಾಗಿ ತಾಂತ್ರಿಕತೆಗೆ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯಕತೆಯಿದ್ದು, ಹೊಸ ಆವಿಷ್ಕಾರ, ತಂತ್ರಜ್ಞಾನದ ಬಳಕೆಯಿಂದಾಗಿ ಭವಿಷ್ಯದಲ್ಲಿ ಕೃಷಿಯ ಪ್ರಗತಿಯನ್ನು ಸಾಧಿಸಬೇಕಾಗಿದೆ ಎಂದರು.

ರಾಜ್ಯದಲ್ಲಿ ಪ್ರತಿ ಪಂಚಾಯಿತಿ, ಬ್ಲಾಕ್ ಹಾಗೂ ಜಿಲ್ಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೃಷಿ ತಾಂತ್ರಿಕರನ್ನು ನೇಮಿಸುವುದು ಹಾಗೂ ಕೃಷಿ ತಾಂತ್ರಿಕ ನಿರ್ದೇಶನಾಲಯವನ್ನು ಸ್ಥಾಪನೆ ಮಾಡುವ ಮೂಲಕ ಕೃಷಿ ವಲಯದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕ ರಾಜ್ಯವು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಅನೇಕ ನೂತನ ಪರಿಷ್ಕರಣೆಗಳನ್ನು ಮಾಡುವ ಮೂಲಕ ರೈತರಿಗೆ ಹಾಗೂ ದೇಶದ ಅಭಿವೃದ್ಧಿಗಾಗಿ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಹೇಳಿದರು.

ಕೃಷಿ ಶಿಕ್ಷಣ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳು ದೇಶದ ಕೃಷಿ ವಲಯದ ಅಭಿವೃದ್ಧಿಗೂ ತಮ್ಮ ಕೊಡಗೆಯನ್ನು ನೀಡಬೇಕು. ನಿರಂತರವಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಮುಂದಿನ ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಯಶಸ್ವಿ ಕಾಣಬೇಕು ಎಂದು ಸಲಹೆ ನೀಡಿದರು.