ಸಾರಾಂಶ
27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಕನ್ನಡಪ್ರಭ ವಾರ್ತೆ ಮಂಗಳೂರುಕನ್ನಡದ ಶತ್ರು ಯಾರು ಎಂದು ಕೇಳುವ ಕಾಲವಿತ್ತು. ಇಂದು ಕನ್ನಡದ ಮಿತ್ರ ಯಾರು ಎಂದು ಹೇಳುವ ಕಾಲ ಬಂದಿದೆ. ತಂತ್ರಜ್ಞಾನವೇ ಕನ್ನಡದ ಮಿತ್ರ ಎಂದು ಹಿರಿಯ ಸಾಹಿತಿ, ‘ಕನ್ನಡಪ್ರಭ’ ಪುರವಣಿ ಸಂಪಾದಕ ಜೋಗಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳೂರು ವಿವಿ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.ಹಿಂದೆ ಕನ್ನಡಕ್ಕೆ ಶತ್ರುವಾಗಿ ಕಾಣುತ್ತಿದ್ದುದು ಶೈಕ್ಷಣಿಕ, ಸಾಂಸ್ಕೃತಿಕ, ಮನರಂಜನಾತ್ಮಕ ಬದಲಾವಣೆಗಳು. ತಂತ್ರಜ್ಞಾನವನ್ನೂ ಕನ್ನಡದ ಶತ್ರು ಎಂದು ಬಿಂಬಿಸುವ ಅಪಾಯವಿತ್ತು. ಕನ್ನಡಕ್ಕೆ ತಂತ್ರಜ್ಞಾನ ವರದಾನವಾಗಿರುವ ಈ ಕಾಲದಲ್ಲಿ ಅದನ್ನು ಶತ್ರುವೆಂದು ಪರಿಗಣಿಸಬಾರದು. ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನವೇ ಕನ್ನಡದ ನಿಜವಾದ ಮಿತ್ರ. ಹಳ್ಳಿಯ ಹುಡುಗನೊಬ್ಬ ತನ್ನ ಕವನವನ್ನು ಪತ್ರಿಕೆಗಳಿಗೆ ಕಾಯದೆ ಜಾಲತಾಣಗಳ ಮೂಲಕ ಜಗತ್ತಿನ ಓದುಗರಿಗೆ ತಲುಪಲು ಸಾಧ್ಯವಾಗಿದೆ. ಮೊಬೈಲ್ ಫೋನ್ ಮೂಲಕ ಕನ್ನಡವನ್ನು ಅದೆಷ್ಟೋ ಮಂದಿ ಕಲಿಯುತ್ತಿದ್ದಾರೆ ಎಂದು ಜೋಗಿ ವಿಶ್ಲೇಷಿಸಿದರು.ಎಐನಿಂದಲೂ ಕನ್ನಡಕ್ಕೆ ಒಳಿತು:
ಪ್ರಸ್ತುತ ನಮ್ಮೆದುರಿನ ಬಹಳ ದೊಡ್ಡ ಸವಾಲೆಂದರೆ ಎಐ (ಕೃತಕ ಬುದ್ಧಿಮತ್ತೆ). ಕನ್ನಡಕ್ಕೆ ಎಐನಿಂದಲೂ ಒಳ್ಳೆಯದೇ ಆಗಿದೆ. ಇದುವರೆಗೆ ಕನ್ನಡದಲ್ಲಿ ಕಾಗುಣಿತ ಇತ್ಯಾದಿ ತಪ್ಪುಗಳನ್ನು ಪರಿಶೀಲಿಸಿ ಸರಿಪಡಿಸಲು ಯಾವುದೇ ಮೊಬೈಲ್ ಆಪ್‌ಗಳು ಇರಲಿಲ್ಲ. ಆದರೆ ಕೃತಕ ಬುದ್ಧಿಮತ್ತೆಯ ಆಪ್‌ಗಳಲ್ಲಿ ಕನ್ನಡ ಬರಹವನ್ನು ಹಾಕಿದರೆ, ತಪ್ಪುಗಳನ್ನು ಗುರುತಿಸಿ ಸರಿಪಡಿಸಲು ಸಲಹೆ ನೀಡುತ್ತವೆ ಎಂದು ಉದಾಹರಣೆ ಸಹಿತ ವಿವರಿಸಿದರು.ಪ್ರಸ್ತುತ ನಡೆಯುುವ ಪ್ರತಿ ಕನ್ನಡ ಸಾಹಿತ್ಯ ಸಮ್ಮೇಳನವೂ ವಿಶ್ವ ಕನ್ನಡ ಸಮ್ಮೇಳನಗಳೇ. ಯಾವುದೇ ಮೂಲೆಯಲ್ಲಿ ನಡೆಯುವ ಸಮ್ಮೇಳನವನ್ನು ಏಕಕಾಲದಲ್ಲಿ ವಿಶ್ವದ ಇನ್ನೊಂದು ಮೂಲೆಯಿಂದ ನೋಡಬಹುದು. ನಾವು ಮಾಡಬೇಕಾದ ಕೆಲಸವನ್ನು ತಂತ್ರಜ್ಞಾನ ಮಾಡುತ್ತಿದೆ. ಹೀಗಾಗಿ ತಂತ್ರಜ್ಞಾನವನ್ನು ದೂರುವ ಬದಲು ಅದನ್ನು ಹೇಗೆ ಕನ್ನಡದ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಜೋಗಿ ಸಲಹೆ ನೀಡಿದರು.
ಸಾಹಿತ್ಯಕ್ಕಿದೆ ನಾಡು ಪ್ರಭಾವಿಸುವ ಶಕ್ತಿ:ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಊರಿನ ರಸ್ತೆಗೆ ಮೊದಲು ಡಾಂಬರು ಬಂದ ಕತೆಯನ್ನು ಬರೆದಿದ್ದರು. ಅದೇ ರೀತಿ ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಪುಟ್ಟಕ್ಕನ ಹೈವೇ’ ಎಂಬ ಕತೆ ಬರೆದರು, ಬಿ. ಸುರೇಶ್ ನಿರ್ದೇಶನದಲ್ಲಿ ಅದು ಸಿನಿಮಾ ಆಯ್ತು. ಇಂಥ ಬದಲಾವಣೆಗಳು ಕತೆಯಾಗಿ ಹೊಳೆಯೋದು ಇಂದಿನ ಯುವಕರಿಗೆ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅಡಿಗರು, ಬಿ.ವಿ. ಕಾರಂತರು, ಕುವೆಂಪು, ದ.ರಾ ಬೇಂದ್ರೆಯಂಥ ಸಾಹಿತಿಗಳಿಗೆ ಎಲ್ಲೋ ಒಂದೆಡೆ ಇದ್ದುಕೊಂಡು ಇಡೀ ನಾಡನ್ನು ಪ್ರಭಾವಿಸುವ ಶಕ್ತಿ ಇತ್ತು. ಮುಂದಿನ ತಲೆಮಾರು ಸಾಹಿತ್ಯಕ್ಕಿರುವ ಇಂಥ ಶಕ್ತಿಯನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡದ ಸ್ಥಿತಿಗತಿ ಕಳೆದ 30 ವರ್ಷಗಳಿಂದ ಬದಲಾಗುತ್ತಿದೆ. ತಂತ್ರಜ್ಞಾನ ಹೊಸ ಸಾಧ್ಯತೆಗಳನ್ನು ಕಲ್ಪಿಸುತ್ತಿದೆ. ಕನ್ನಡದ ಹೆಣ್ಮಕ್ಕಳು ಮತ್ತಷ್ಟು ಸಬಲರಾಗುತ್ತಿದ್ದಾರೆ. ಇವೆಲ್ಲದರ ನಡುವೆ ಭಾಷೆಗೆ ಇರುವ ಶಕ್ತಿಯನ್ನು ಬಹಳ ಚೆನ್ನಾಗಿ ದುಡಿಸಿಕೊಂಡರೆ ನಾಡಿನ ಅಭ್ಯುದಯ ಸಾಧ್ಯವಾಗಲಿದೆ. ಜಪಾನ್ ದೇಶದಲ್ಲಿ ಕೈತುಂಬ ಸಂಬಳ ಸಿಗುತ್ತದೆಂದು ಒಂದೇ ವರ್ಷದಲ್ಲಿ ಜಪಾನಿ ಭಾಷೆ ಕಲಿಯುತ್ತಾರೆ. ಜಪಾನಿನ ಭಾಷೆಗೆ ಈ ಶಕ್ತಿ ಇದೆ ಎಂದಾದರೆ ಕನ್ನಡದ ಮೂಲಕವೇ ಬದುಕು ಕಟ್ಟಿಕೊಳ್ಳಲು ಸಾಧ್ಯ ಎನ್ನುವ ಶಕ್ತಿ ನಮ್ಮ ಭಾಷೆಗೂ ಬರಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸನ್ಮಾನಿಸಿದರು. ಸಮ್ಮೇಳನ ಅಧ್ಯಕ್ಷ ಡಾ.ಪ್ರಭಾಕರ ಶಿಶಿಲ ಮಾತನಾಡಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಎಸ್‌ವಿಪಿ ಕನ್ನಡ ಅಧ್ಯಯನ ಪೀಠದ ಡಾ.ಸೋಮಣ್ಣ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರಿದ್ದರು.
---------------ಮಾದರಿ ಕನ್ನಡ ಶಾಲೆಗಳನ್ನು ಕಟ್ಟಿ: ಮೋಹನ್ ಆಳ್ವ ಸಲಹೆರಾಜ್ಯದಲ್ಲಿರುವ ಕೆಲವು ಕನ್ನಡ ಮಾಧ್ಯಮ ಶಾಲೆಗಳನ್ನಾದರೂ ಮಾದರಿ ಶಾಲೆಗಳನ್ನಾಗಿ ಮಾಡಬೇಕಾದ ಅಗತ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಒತ್ತಾಯಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳು ಉಳಿಯದೆ ಇದ್ದರೆ ಕನ್ನಡ ಭಾಷೆ, ಸಂಸ್ಕೃತಿ ಮುಂದುವರಿಯುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕೆಲವು ಕನ್ನಡ ಮಾಧ್ಯಮ ಶಾಲೆಗಳನ್ನಾದರೂ ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲವೇ? ಕನ್ನಡ ಶಾಲೆಗಳು ಕ್ರಮೇಣ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಬದಲಾಯಿಸುತ್ತಿರುವ ಕಾಲದಲ್ಲಿ ಇಂಥದ್ದೊದ್ದು ಉತ್ತಮ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು. ಸೂಕ್ತ ಅನುದಾನ ನೀಡಿದರೆ ತಾನು ಈ ಕಾರ್ಯ ಮಾಡಿಕೊಡುವುದಾಗಿಯೂ ಅವರು ಭರವಸೆ ನೀಡಿದರು.