ಸಾರಾಂಶ
2020ರಿಂದ ಪ್ರತಿವರ್ಷ ಮಾ. 4ರಂದು ವಿಶ್ವಾದ್ಯಂತ ಯುನೆಸ್ಕೋ ಅಂತಾರಾಷ್ಟ್ರೀಯ ಎಂಜಿನಿಯರಿಂಗ್ ದಿನವಾಗಿ ಆಚರಿಸಲಾಗುತ್ತದೆ.
ಹೊಸಪೇಟೆ: ಸುಸ್ಥಿರ ಅಭಿವೃದ್ಧಿಗೆ ತಂತ್ರಜ್ಞಾನವೇ ಪರಿಹಾರ. ಆದ್ದರಿಂದ ಸುಸ್ಥಿರ ವಿಶ್ವ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ಗುರುತರವಾದುದು ಎಂದು ಹೊಸಪೇಟೆಯ ಟಿಎಂಎಇಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಕೆ. ಶಂಕರಾನಂದ ತಿಳಿಸಿದರು.
ಹೊಸಪೇಟೆಯ ಟಿಎಂಎಇಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮುನಿರಾಬಾದಿನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಎಂಜಿನಿಯರಿಂಗ್ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿ, 2020ರಿಂದ ಪ್ರತಿವರ್ಷ ಮಾ. 4ರಂದು ವಿಶ್ವಾದ್ಯಂತ ಯುನೆಸ್ಕೋ ಅಂತಾರಾಷ್ಟ್ರೀಯ ಎಂಜಿನಿಯರಿಂಗ್ ದಿನವಾಗಿ ಆಚರಿಸಲಾಗುತ್ತದೆ ಎಂದರು.ಕಾಲೇಜಿನ ಉಪಪ್ರಾಂಶುಪಾಲ ಟಿ. ನಜಿರುದ್ದೀನ್ ಮತ್ತು ಅಧ್ಯಾಪಕ ಡಾ. ಬಿ.ಎಚ್. ಶಿವರಾಜ್ ಸುಸ್ಥಿರ ಅಭಿವೃದ್ಧಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್‌ಸ್ಟಿಟ್ಯೂಟಶನ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಂ. ಶಶಿಧರ್ ಮಾತನಾಡಿ, ವಿಶ್ವವು ನಾವು ಹಿರಿಯರಿಂದ ಪಡೆದ ಬಳುವಳಿ ಅಲ್ಲ. ಇದನ್ನು ನಮ್ಮ ಮುಂದಿನ ಪೀಳಿಗೆಗಳಿಂದ ಎರವಲು ಪಡೆದಿದ್ದೇವೆ. ಆದ್ದರಿಂದ ನಾವು ಮುಂದಿನ ಪೀಳಿಗೆಗಳಿಗಾಗಿ ಈ ವಿಶ್ವವನ್ನು ಜತನದಿಂದ ಕಾಯ್ದುಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ದಿಸೆಯಲ್ಲಿ ಎಂಜಿನಿಯರ್‌ಗಳ ಮಹತ್ವದ ಪಾತ್ರವನ್ನು ಅರಿತು ಎಂಜಿನಿಯರಿಂಗ್ ದಿನವನ್ನು ಆಚರಿಸಲಾಗುತ್ತಿದೆ ಎಂದರು.ಇನ್‌ಸ್ಟಿಟ್ಯೂಶನ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶರತ್ ಕುಮಾರ್ ಸ್ವಾಗತಿಸಿದರು. ಡಾ. ವೀರೇಶ್, ಟಿಎಚ್ಎಂ ಸೋಮಶೇಖರ್, ಕಟ್ಟ ನಂಜಪ್ಪ ಮುಂತಾದವರು ಉಪಸ್ಥಿತರಿದ್ದರು. ಮೈನಿಂಗ್ ವಿಭಾಗದ ಮುಖ್ಯಸ್ಥ ಟಿ.ಎಲ್. ಯೋಗಾನಂದ ವಂದಿಸಿದರು. ಅಧ್ಯಾಪಕಿ ಯಮುನಾ ಕುಲಕರ್ಣಿ ನಿರೂಪಿಸಿದರು. 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.