ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಂಸ ಉಮೇಶ ಜಾಧವ್‌ ಚಾಲನೆ

| Published : Mar 11 2024, 01:19 AM IST

ಸಾರಾಂಶ

ಮೋದಿಯವರ ಆಡಳಿತದಲ್ಲಿ ಕಲ್ಬುರ್ಗಿ ಈಗ ನಂಬರ್ ಒನ್ ಸ್ಥಾನ ಪಡೆಯುತ್ತಿದ್ದು, ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಲು ಜನತೆ ಸಾಥ್ ನೀಡಬೇಕಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮೋದಿಯವರ ಆಡಳಿತದಲ್ಲಿ ಕಲ್ಬುರ್ಗಿ ಈಗ ನಂಬರ್ ಒನ್ ಸ್ಥಾನ ಪಡೆಯುತ್ತಿದ್ದು, ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಲು ಜನತೆ ಸಾಥ್ ನೀಡಬೇಕಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಮನವಿ ಮಾಡಿದರು.

ಕಲಬುರಗಿ ರಿಂಗ್ ರಸ್ತೆಯ ಹುಮ್ನಾಬಾದ್ ಬೇಸ್ ನಿಂದ ರಾಮಮಂದಿರದ ವರೆಗಿನ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತವು ಮುಂದಿನ ಐದು ವರ್ಷಗಳ ಕ್ರಿಯಾಯೋಜನೆ ಈಗಾಗಲೇ ಸಿದ್ಧಪಡಿಸಿಕೊಂಡಿದ್ದು ಇದರಲ್ಲಿ ಕಲಬುರ್ಗಿ ಭಾಗಕ್ಕೂ ಅನೇಕ ಯೋಜನೆಗಳನ್ನು ಒಳಪಡಿಸಲಾಗಿದೆ. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸುಮಾರು 57 ಕೋಟಿ ರು. ಮಂಜೂರಾಗಿದ್ದು ಇನ್ನೂ ಅವಶ್ಯಕತೆ ಇರುವ 28 ಕೋಟಿ ರು. ನೀಡಲು ಇಲಾಖೆ ಮುಂದಾಗಿದೆ ಎಂದರು.

ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ನವರ 65 ವರ್ಷಗಳ ಆಡಳಿತ ಹಾಗೂ ಮೋದಿಯವರ ಹತ್ತು ವರ್ಷಗಳ ಆಡಳಿತವನ್ನು ತುಲನೆ ಮಾಡಿದರೆ ನಿಜ ಏನೆಂದು ತಿಳಿದು ಬರುತ್ತದೆ. ಈ ಬಗ್ಗೆ ಕಾಂಗ್ರೆಸ್ಸಿನವರು ಮುಕ್ತ ಚರ್ಚೆಗೆ ಆಹ್ವಾನಿಸಿದರೆ ಚರ್ಚಿಸಲು ಸಿದ್ಧ ಎಂದು ಸವಾಲೆಸೆದರು.

ಈ ಬಾರಿ ಮೋದಿಗೆ ಮತ: ''''ಅಬ್ ಕೀ ಬಾರ್ ಚಾರ್ ಸೌ ಪಾರ್'''' ಸ್ಥಾನಗಳಿಸಲು ಮೋದಿ ಅವರು ಮಾಡಿದ ಕೆಲಸ ಕಾರ್ಯಗಳನ್ನು ಜನರ ಬಳಿಗೆ ಮುಟ್ಟಿಸಬೇಕು ಮುಂದಿನ 40 ದಿನಗಳಲ್ಲಿ ಅವಿಶ್ರಾಂತವಾಗಿ ಎಲ್ಲರೂ ಕೆಲಸ ಮಾಡಿ ಭಾರತಕ್ಕೆ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯವರನ್ನಾಗಿ ಮಾಡಬೇಕಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಬೇಕಾಗಿದೆ. ಹಿಂದೂ ಸನಾತನ ಧರ್ಮವನ್ನು ಹೀಯಾಳಿಸುವವರು ದೇಶದ್ರೋಹಿಗಳಾಗಿದ್ದು 500 ವರ್ಷಗಳ ಕರಾಳ ಇತಿಹಾಸ ತೊಡೆದು ಹಾಕಿ ರಾಮ ಮಂದಿರ ನಿರ್ಮಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಟಿವಿಯಲ್ಲಿ ಮೋದಿಯವರ ಮುಖ ದರ್ಶನ ಮಾಡಿದರೆ ಅಪಶಕುನ ಎಂಬ ಹೇಳಿಕೆಯನ್ನು ನೀಡಿದ ಅಪಪ್ರಬುದ್ಧ ರಾಜಕಾರಣಿಯ ಅವಿವೇಕತನದ ಹೇಳಿಕೆಯು ಖಂಡನೀಯ ಅಂಥವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ಜೆಡಿಎಸ್ ನ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಯುವ ಮುಖಂಡ ಚಂದು ಪಾಟೀಲ್ ಮಾತನಾಡಿದರು. ಎಂಎಲ್‌ಸಿ ಬಿಜಿ ಪಾಟೀಲ್, ಮೇಯರ್ ವಿಶಾಲ ದರ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಉಪಮೇಯರ್ ಶಿವಾನಂದ ಪಿಸ್ತಿ, ರಾಜಶೇಖರ್ ಮಹಾಗಾಂವ, ರವಿರಾಜ್ ಕೊರವಿ, ಕೃಷ್ಣಾ ರೆಡ್ಡಿ, ಉಮೇಶ್ ಪಾಟೀಲ, ಶಾಂತಾಬಾಯಿ ಮಂಜುನಾಥ ಕಳಸ್ಕರ್ ರೇವಣಸಿದ್ದಪ್ಪ, ಶಂಕರ್, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಇದ್ದರು.