ತಿಳಿವಳಿಕೆ ಇಲ್ಲದವರ ಮಾತಿಗೆ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Mar 11 2024, 01:19 AM IST

ತಿಳಿವಳಿಕೆ ಇಲ್ಲದವರ ಮಾತಿಗೆ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟೆ ಕಡೆಯ ರೈತನ ಜಮೀನುಗಳಿಗೆ ಸಮರ್ಪಕ ನೀರನ್ನು ಒದಗಿಸಲು ನಾಲಾ ಆಧುನೀಕರಣ ಮಾಡಲಾಗುತ್ತಿದೆ. ಕಾಮಗಾರಿಗಳು ಸಕಾಲಕ್ಕೆ ಪೂರೈಕೆಯಾಗುವಂತೆ ನಾನೇ ಖುದ್ದಾಗಿ ನಿಂತು ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ಎಚ್ಚರಿಕೆ ವಹಿಸಲಾಗುವುದು. ಬೇರೆಯವರ ರೀತಿಯಲ್ಲಿ ಸುಳ್ಳು, ಹಾಡು ಹೇಳಿಕೊಂಡು ಅಥವಾ ನಾಟಕವಾಡಿಕೊಂಡು ಕಾಲ ಕಳೆಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿಶಾಸಕನಾಗಿದ್ದವರಿಗೆ ಒಂದು ಬಡಾವಣೆಯ ನಕ್ಷೆ, ರಸ್ತೆ ಹೇಗಿರಬೇಕು. ಭವಿಷ್ಯದಲ್ಲಿ ಜನರಿಗೆ ಏನು ಅನುಕೂಲ ಮಾಡಿಕೊಡಬೇಕೆಂಬ ತಿಳಿವಳಿಕೆ ಇಲ್ಲದವರ ಮಾತಿಗೆ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಛೇಡಿಸಿದರು.

ಹೆಬ್ಬಕವಾಡಿ ಸಮೀಪ 99.89 ಕೋಟಿ ರು. ವೆಚ್ಚದಲ್ಲಿ ಹಮ್ಮಿಕೊಂಡಿರುವ ವಿಶ್ವೇಶ್ವರಯ್ಯ ನಾಲಾ ಆಧುನೀಕರಣಕ್ಕೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದರು.

ತಮ್ಮ 5 ವರ್ಷದ ಅವಧಿಯಲ್ಲಿ ಕಿರುಗಾವಲು ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆ, ತಿಟ್ಟಮಾರನಹಳ್ಳಿ ಏತ ನೀರಾವರಿ, ಪಟ್ಟಣದ 24*7 ಕುಡಿಯುವ ನೀರಿನ ಯೋಜನೆ, ಪೂರಿಗಾಲಿ ಹನಿನೀರಾವರಿ ಯೋಜನೆ ಸೇರಿದಂತೆ ಇತರೆ ಮುಂದುವರೆದ ಕಾಮಗಾರಿಗಳಲ್ಲಿ ಒಂದನ್ನೂ ಪೂರ್ಣಗೊಳಿಸಲು ಅವರಿಂದ ಆಗಿಲ್ಲ. ಅನುದಾನ ತಂದಿದ್ದರೇ ಕಾಮಗಾರಿ ಆರಂಭಿಸಬೇಕಿತ್ತು. ಕೇವಲ ಮಾತನಾಡಿದರೇ ಸಾಲದು ಸೇವೆ ಮಾಡುವ ಇಚ್ಛೆ ಹೊಂದಿರಬೇಕು ಎಂದರು.

ಕಟ್ಟೆ ಕಡೆಯ ರೈತನ ಜಮೀನುಗಳಿಗೆ ಸಮರ್ಪಕ ನೀರನ್ನು ಒದಗಿಸಲು ನಾಲಾ ಆಧುನೀಕರಣ ಮಾಡಲಾಗುತ್ತಿದೆ. ಕಾಮಗಾರಿಗಳು ಸಕಾಲಕ್ಕೆ ಪೂರೈಕೆಯಾಗುವಂತೆ ನಾನೇ ಖುದ್ದಾಗಿ ನಿಂತು ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಕೃಷಿಕ ಬದುಕಿನ ಜೊತೆಯಲ್ಲಿ ನಾಡಿನ ಸ್ತ್ರೀ ಸಾಮಾನ್ಯರಿಗೆ ಅವಶ್ಯಕತೆ ಇರುವ ಪ್ರತಿಯೊಂದು ಜವಾಬ್ದಾರಿಯನ್ನು ನಮ್ಮ ಸರ್ಕಾರ ಈಡೇರಿಸುತ್ತದೆ. ಬೇರೆಯವರ ರೀತಿಯಲ್ಲಿ ಸುಳ್ಳು, ಹಾಡು ಹೇಳಿಕೊಂಡು ಅಥವಾ ನಾಟಕವಾಡಿಕೊಂಡು ಕಾಲ ಕಳೆಯುತ್ತಿಲ್ಲ ಎಂದು ಟೀಕಿಸಿದರು.

ಶನಿವಾರ ಸುಮಾರು 180 ಕೋಟಿಗೂ ಹೆಚ್ಚು ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ. ಕ್ಷೇತ್ರದ ಮತದಾರರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿಯೂ ಶಕ್ತಿ ಮೀರಿ ಶಾಶ್ವತ ಯೋಜನೆಗಳು ಅನುಷ್ಠಾನಗೊಳ್ಳುವಂತೆ ಶ್ರಮಿಸುತ್ತೇನೆ ಎಂದರು.

ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಅನುದಾನ ಕೊಟ್ಟಿದ್ದು ಎಷ್ಟು. ಅವರ ಖರ್ಚು ಮಾಡಿರುವುದು ಎಷ್ಟು ಇದನ್ನು ಅರ್ಥ ಮಾಡಿಕೊಂಡರೇ ಕನಕ ಭವನದ ಕಬ್ಬಿಣ ತುಕ್ಕು ಹಿಡಿಸಿರುವುದು ಯಾರು ಎಂದು ತಿಳಿಯುತ್ತದೆ. ಯಾರ ಅವಧಿಯಲ್ಲಿ ಯಾರು ತಹಸೀಲ್ದಾರ್ ಇದ್ದಾಗ ಸಾವಿರಾರು ಎಕರೆ ಭೂಮಿ ಪರಭಾರೆಯಾಗಿರುವುದು, ಪ್ರವಾಸಿ ಮಂದಿರದಲ್ಲಿ ಕುಳಿತು ತೀರ್ಮಾನ ಮಾಡುತ್ತಿದ್ದವರು ಯಾರು ಎನ್ನುವುದು ಅತಿ ಶೀಘ್ರದಲ್ಲಿಯೇ ತಿಳಿಯುತ್ತದೆ ಎಂದರು.

ಇದೇ ವೇಳೆ ಜಿಪಂ ಮಾಜಿ ಸದಸ್ಯರಾದ ಆರ್.ಎನ್ ವಿಶ್ವಾಸ್, ಸುಜಾತ ಕೆ.ಎಂ ಪುಟ್ಟು, ತಾಪಂ ಉಪಾಧ್ಯಕ್ಷ ಸಿ.ಮಾಧು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಪಿ ರಾಜು, ವಕೀಲ ಜಗದೀಶ್, ಮುಖಂಡರಾದ ದೀಪು, ಶಿವಮೂರ್ತಿ, ಕೃಷ್ಣಮೂರ್ತಿ, ವೇದಮೂರ್ತಿ, ಬಂಕ್ ಮಹದೇವು ತಳಗವಾದಿ ವಿಶ್ವ, ಚೇತನ್, ಪ್ರಕಾಶ್, ಶಿವರಾಜ್, ಶಶಿ ಸೇರಿದಂತೆ ಇತರರು ಇದ್ದರು.