ನಾಳೆ ಕಲಬುರಗಿ ಪಂಚಮಸಾಲಿ ದೀಕ್ಷ ಸಮಾವೇಶ

| Published : Mar 11 2024, 01:18 AM IST / Updated: Mar 11 2024, 01:19 AM IST

ಸಾರಾಂಶ

ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ಪಂಚಮಸಾಲಿ ದೀಕ್ಷ ಬಾಂಧವರಿಗೆ 2ಎ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಒಳಪಂಡಗಳಿಗೆ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಬೇಡಿಕೆಗೆ ಪಕ್ಷಭೇದ ಮರೆತು ಹೋರಾಟಕ್ಕೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಆಳಂದ

ಕೃಷಿಯನ್ನೇ ನಂಬಿ ಜಗತ್ತಿಗೆ ಅನ್ನ ನೀಡುತ್ತಾ ಬಂದಿರುವ ಲಿಂಗಾಯತ ಸಮಾಜ ಬಾಂಧವರು ಸಂಕಷ್ಟದಲ್ಲಿ ದಿನದೊಡುತ್ತಾ ತೀರಾ ಆರ್ಥಿಕ ಮತ್ತು ಸಾಮಾಜಿಕವಾಗಿ ಕುಗ್ಗಿಹೋಗಿದ್ದಾರೆ. ಹೀಗಾಗಿ ಅನಿವಾರ್ಯವಾದ ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ಪಂಚಮಸಾಲಿ ದೀಕ್ಷ ಬಾಂಧವರಿಗೆ 2ಎ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಒಳಪಂಡಗಳಿಗೆ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಬೇಡಿಕೆಗೆ ಪಕ್ಷಭೇದ ಮರೆತು ಹೋರಾಟಕ್ಕೆ ಮುಂದಾಗಬೇಕು ಎಂದು ಕೊಡಲಸಂಗಮ ಪೀಠದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ಮಾ.12ರಂದು ಕಲಬುರಗಿಯಲ್ಲಿ ನಡೆಯಲಿರುವ ಪಂಚಮಸಾಲಿ ಮೀಸಲಾಯಿತಿ ಹೋರಾಟ ಸಮಾವೇಶದ ಸಿದ್ಧತೆಗಾಗಿ ತಾಲೂಕಿನ ಖಜೂರಿ ಗ್ರಾಮದ ಕೋರಣೇಶ್ವರ ಮಠದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆ ಮುನ್ನ ಕೋರಣೇಶ್ವರ ಕರ್ತೃಗದ್ದುಗೆಗೆ ಹೂಮಾಲೆ ಹಾಕಿ ಬಳಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಯಾವುದೇ ಜಾತಿ ಅಥವಾ ಪಕ್ಷದ ವಿರುದ್ಧ ನಮ್ಮ ಹೋರಾಟವಾಗಿಲ್ಲ. ಸಮಾಜದ ಜನರಿಗೆ ಸರ್ಕಾರದಿಂದ ದೊರೆಯಬೇಕಿರುವ ಹಕ್ಕಿನ ಹೋರಾಟಕ್ಕೆ ಸರ್ವರೂ ಕೈಜೋಡಿಸಬೇಕು ಎಂದು ಹೇಳಿದರು.

ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯಗಳಿಗೆ ಮೀಸಲಾತಿ ದೊರೆತಂತೆ ದೀಕ್ಷ ಪಂಚಮಸಾಲಿ ಸಮುದಾಯಕ್ಕೂ 2ಎ ಮೀಸಲಾಯಿತಿ ನೀಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಕೈಗೊಳ್ಳುತ್ತಾ ಬರಲಾಗಿದೆ. ಆದರೆ ಸರ್ಕಾರಗಳು ಅಶ್ವಾಸನೆ ಕೊಡುತ್ತಲೆ ಬಂದಿವೆ ಆದರೆ ವಾಸ್ತವ್ಯದಲ್ಲಿ ಮೀಸಲಾತಿ ಕಲ್ಪಿಸುತ್ತಿಲ್ಲ ಎಂದರು.

ಕೇಂದ್ರ ಮೀಸಲು ಪಟ್ಟಿಯಲ್ಲಿ ಒಟ್ಟು ಲಿಂಗಾಯತ ಒಳಪಂಗಡಗಳಿಗೆ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ತಕ್ಷಣ ಕೈಗೊಳ್ಳಬೇಕು ಎಂಬ ಹಲವು ಬೇಡಿಕೆ ಮುಂದಿಟ್ಟು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಾಯಿಸಲು ಸಮಾವೇಶ ಸಭೆ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಸಮಾಜದ ಮಕ್ಕಳ ಉನ್ನತಿಗಾಗಿ ಎಲ್ಲರೂ ಭಾಗವಹಿಸಬೇಕೆಂದರು.

ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷ ಶರಣು ಪಪ್ಪಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ತಾಲೂಕು ಅಧ್ಯಕ್ಷ ಆನಂದ ಎಸ್. ದೇಶಮುಖ ಅವರು ಮಾತನಾಡಿ, ಮಾ.12ರಂದು ಕಲಬುರಗಿ ಶ್ರೀ ಶರಣಬಸವೇಶ್ವರ ದೇವಸ್ಥಾನ ಜಾತ್ರಾ ಮೈದಾನದಲ್ಲಿ ಮಧ್ಯಾಹ್ನ 4.00ಗಂಟೆಗೆ ನಡೆಯುವ ಕಲ್ಯಾಣ ಕರ್ನಾಟಕ ಪಂಚಮಸಾಲಿ ಪ್ರಥಮ ಸಮಾವೇಶದಲ್ಲಿ ಸಮಾಜದ ಸರ್ವ ಪಕ್ಷಗಳ ಮುಖಂಡರು ಹಾಗೂ ವೀರಶೈವ ಲಿಂಗಾಯತ ಒಳಪಂಗಡ ಸೇರಿ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.

ಗ್ರಾಮದ ಭೀಮರಾವ್ ಢಗೆ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಬಂಗರಗಿ, ವೈಜನಾಥ ತಡಕಲ್, ಈರಣ್ಣಾ ಬಂಗರಗಿ, ತಿಪ್ಪಣ್ಣಾ ಬಂಡೆ, ಶ್ರೀಶೈಲ ಭೀಂಪೂರೆ, ರಾಜಶೇಖರ ಗುಗ್ಗರೆ, ಶರಣಪ್ಪ ಢಗೆ, ಶಿವಲಿಂಗಪ್ಪ ಬಂಗರಗೆ, ಕರಬಸಪ್ಪಾ ಸುಲ್ತಾನಪೂರೆ, ಶಿವುಪುತ್ರ ಶಾರ್, ದೇವಂತಗಿ ಶರಣಗೌಡ, ಸಿದ್ಧಣ್ಣಗೌಡ ಪಾಟೀಲ ಮಗಿ, ನ್ಯಾಯವಾದಿ ಮಹಾದೇವ ಹತ್ತಿ ಮತ್ತಿತರು ಭಾಗವಹಿಸಿದ್ದರು.

ಕಿಣ್ಣಿಸುಲ್ತಾನ ಗ್ರಾಮದಲ್ಲಿ ನಡೆದ ಸಿದ್ಧತಾ ಸಭೆಯಲ್ಲಿ ಮುಖಂಡ ಸಿದ್ಧರಾಮ ದೇಸಾಯಿ, ನ್ಯಾಯವಾದಿ ಶಿವಶಂಕರ ಮುನ್ನೊಳಿ, ಶಾಂತಪ್ಪ, ಲಿಂಗು ಜಾನೆ, ಸಿದ್ಧರಾಮ ಪಾಟೀಲ ಮತ್ತಿತರರು ಇದ್ದರು.

ತಂಬಾಕವಾಡಿ ಗ್ರಾಮದಲ್ಲಿ ತಂಬಾಕವಾಡಿ ಗ್ರಾಮದಲ್ಲಿ ಸಮಾಜ ಬಾಂಧವರು ಸೇರಿ ಗ್ರಾಮದಲ್ಲಿ ಆಳಂದ ಮಲ್ಲಪ್ಪ ಹತ್ತರಕಿ, ರೇವಣಸಿದ್ಧಪ್ಪಾ ನಾಗೂರೆ, ಲಿಂಗರಾಜ ಪಾಟೀಲ, ಮಹಾದೇವ ಹತ್ತಿ, ಮುನ್ನಹಳ್ಳಿ ಪಿಕೆಪಿ ಅಧ್ಯಕ್ಷ ವೀರಭದ್ರಪ್ಪ ಕೋರೆ, ಸಿದ್ಧು ವೇದಶೆಟ್ಟಿ ಭಾಗವಹಿಸಿದ್ದರು.