ರಾಜ್ಯದ 2 ವಂದೇ ಭಾರತ್‌ ರೈಲಿಗೆ ಇಂದು ಮೋದಿ ಚಾಲನೆ

| Published : Mar 11 2024, 01:18 AM IST / Updated: Mar 11 2024, 01:19 AM IST

ಸಾರಾಂಶ

ನಾಗವಾರ ಬಳಿಯ ಥಣಿಸಂದ್ರದಲ್ಲಿ ₹ 270 ಕೋಟಿ ವೆಚ್ಚದಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲುಗಳ ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಗೂ ಮೈಸೂರು - ಚೆನ್ನೈ ಮತ್ತು ಬೆಂಗಳೂರು-ಕಲಬುರಗಿ ನಡುವೆ ಎರಡು ವಂದೇ ಭಾರತ್‌ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರುವುದು ಸೇರಿ ವಿವಿಧ ಕಾರ್ಯಗಳಿಗೆ ಪ್ರಧಾನಿ ಮೋದಿ ಅವರು ಮಾ.12 ವರ್ಚ್ಯುವಲ್‌ ಆಗಿ ಚಾಲನೆ ನೀಡಲಿದ್ದಾರೆ.

ಬೆಂಗಳೂರು: ನಾಗವಾರ ಬಳಿಯ ಥಣಿಸಂದ್ರದಲ್ಲಿ ₹ 270 ಕೋಟಿ ವೆಚ್ಚದಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲುಗಳ ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಗೂ ಮೈಸೂರು - ಚೆನ್ನೈ ಮತ್ತು ಬೆಂಗಳೂರು-ಕಲಬುರಗಿ ನಡುವೆ ಎರಡು ವಂದೇ ಭಾರತ್‌ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರುವುದು ಸೇರಿ ವಿವಿಧ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾ.12 ( ಮಂಗಳವಾರ ) ವರ್ಚ್ಯುವಲ್‌ ಆಗಿ ಚಾಲನೆ ನೀಡಲಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೈಋತ್ಯ ರೈಲ್ವೆ ಬೆಂಗಳೂರು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್‌ ಮೋಹನ್‌ಪುರಿಯಾ ಈ ಬಗ್ಗೆ ಮಾಹಿತಿ ನೀಡಿದರು.ವರ್ಷದ ಮಧ್ಯಂತರದಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲುಗಳು ಸಂಚಾರಕ್ಕೆ ಚಾಲನೆ ಪಡೆಯಲಿವೆ. ಇವುಗಳ ನಿರ್ವಹಣೆಗೆ ವಿಶೇಷ ಕೇಂದ್ರದ ಅಗತ್ಯವಿದೆ. ಥಣಿಸಂದ್ರದಲ್ಲಿ ಇದರ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಶೀಘ್ರವೇ ಟೆಂಡರ್‌ ಆಗಲಿದೆ. ವಂದೇ ಭಾರತ್‌ ಚೇರ್‌ಕಾರ್‌ ರೈಲುಗಳ ನಿರ್ವಹಣೆ ಕೂಡ ಸಾಧ್ಯವಾಗುವಂತೆ ನಿರ್ಮಾಣ ಆಗಲಿದ್ದು, ಇದಕ್ಕೆ ಪ್ರಧಾನಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.ರಾಜ್ಯಕ್ಕೆ ಮತ್ತೆರಡು ವಂದೇ ಭಾರತ್:ಸದ್ಯ ಓಡುತ್ತಿರುವ ಮೈಸೂರು - ಚೆನ್ನೈ ವಂದೇ ಭಾರತ್‌ ಶೇ.85 - ಶೇ.90ರಷ್ಟು ಪ್ರಯಾಣಿಕರಿಂದ ಭರ್ತಿ ಆಗುತ್ತಿದೆ. ಇದೇ ಮಾರ್ಗದಲ್ಲಿ ಎರಡನೇ ವಂದೇ ಭಾರತ್‌ ರೈಲಿಗೆ ಮತ್ತು ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಪ್ರಧಾನಿಗಳು ಹಸಿರು ನಿಶಾನೆ ತೋರಲಿದ್ದಾರೆ. ಮೈಸೂರು - ಚೆನ್ನೈ ವಂದೇ ಭಾರತ್‌ ಉದ್ಘಾಟನೆಯಾದ ಒಂದೆರಡು ದಿನಗಳಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ . ಎರಡೂ ರೈಲುಗಳ ಟಿಕೆಟ್ ದರ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ತಿಳಿಸಿದರು.ಕಾರ್ಗೋ ಟರ್ಮಿನಲ್:ದೊಡ್ಡಬಳ್ಳಾಪುರದ ವಡ್ಡರಹಳ್ಳಿ ಬಳಿ ಖಾಸಗಿ ಸ್ಥಳದಲ್ಲಿ ನಿರ್ಮಿಸಲಾದ ಮಲ್ಟಿಮಾಡಲ್‌ ಕಾರ್ಗೋ ಟರ್ಮಿನಲ್‌ ಹಾಗೂ ₹ 21ಕೋಟಿ ವೆಚ್ಚದಲ್ಲಿ ಪೆನುಕೊಂಡ ಬಳಿ ನವೀಕರಣಗೊಂಡ ಆಟೋಮೊಬೈಲ್‌ ಗೂಡ್‌ಶೆಡ್‌ ಕೂಡ ಈ ವೇಳೆ ಅನಾವರಣಗೊಳ್ಳಲಿದೆ. ಇದರಿಂದ ಸರಕು ಸಾಗಣೆಗೆ ಮತ್ತಷ್ಟು ಅನುಕೂಲ ಆಗಲಿದೆ ಎಂದು ವಿವರಿಸಿದರು.ಇನ್ನು, ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ 40 ಮಳಿಗೆಗಳು ಉದ್ಘಾಟನೆಯಾಗಲಿವೆ. ಈಗಾಗಲೆ ವಿಭಾಗದಲ್ಲಿ 40 ಮಳಿಗೆಗಳನ್ನು ತೆರೆಯಲಾಗಿದೆ. ಜೊತೆಗೆ ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣ ಹಾಗೂ ಬಂಗಾರಪೇಟೆ ನಿಲ್ದಾಣದಲ್ಲಿ ತಲಾ ಒಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಅನಾವರಣ ಆಗಲಿದೆ ಎಂದು ಅವರು ತಿಳಿಸಿದರು.ಈ ವೇಳೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣಚೈತನ್ಯ , ಸಾರ್ವಜನಿಕ ಸಂಪರ್ಕಾಧಿಕಾರಿ ತ್ರಿನೇತ್ರ ಸೇರಿ ಇತರರಿದ್ದರು.