ಹಾನಗಲ್ ಕುಮಾರ ಶ್ರೀಗಳು ಶಿಕ್ಷಣ ಬಹಳ ಮುಖ್ಯವೆಂದು ಸಾರಿದರು-ತೋಂಟದ ಸಿದ್ಧರಾಮ ಶ್ರೀಗಳು

| Published : Mar 11 2024, 01:18 AM IST

ಹಾನಗಲ್ ಕುಮಾರ ಶ್ರೀಗಳು ಶಿಕ್ಷಣ ಬಹಳ ಮುಖ್ಯವೆಂದು ಸಾರಿದರು-ತೋಂಟದ ಸಿದ್ಧರಾಮ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅನೇಕ ಧಾರ್ಮಿಕ, ಶಿಕ್ಷಣ, ಸಂಘ ಸಂಸ್ಥೆಗಳಿಗೆ ಮೂಲ ಪ್ರೇರಕರು ಹಾನಗಲ್ ಕುಮಾರಸ್ವಾಮಿಗಳು ಆಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ: ಶಿಕ್ಷಣ ಮರೀಚಿಕೆಯಾಗಿದ್ದ ಕಾಲದಲ್ಲಿ ಹಾನಗಲ್ ಕುಮಾರ ಸ್ವಾಮಿಗಳು ಸಮಾಜದ ಅಭಿವೃದ್ಧಿಗಾಗಿ, ಬಡತನ ಮತ್ತು ದಾರಿದ್ರ್ಯವನ್ನು ಹೋಗಲಾಡಿಸಲು ಶಿಕ್ಷಣ ಬಹಳ ಮುಖ್ಯ ಎಂದು ಸಾರಿದರು. ಅನೇಕ ಧಾರ್ಮಿಕ, ಶಿಕ್ಷಣ, ಸಂಘ ಸಂಸ್ಥೆಗಳಿಗೆ ಮೂಲ ಪ್ರೇರಕರು ಹಾನಗಲ್ ಕುಮಾರಸ್ವಾಮಿಗಳು ಆಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ ೨೬೮೩ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಾನಗಲ್ ಕುಮಾರಸ್ವಾಮಿಗಳು ೧೯೦೪ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿ, ಶಿವಯೋಗ ಮಂದಿರ ಸಂಸ್ಥೆಯ ಮೂಲಕ ಸಾಧಕರಿಗೆ ಧಾರ್ಮಿಕ, ಶಿಕ್ಷಣ, ಸಂಸ್ಕಾರ, ಯೋಗ, ಸಂಗೀತ ತರಬೇತಿ ನೀಡಿ ನಾಡಿಗೆ ಅರ್ಹ ಮಠಾಧೀಶರನ್ನು ನೀಡಿದ್ದಾರೆ ಎಂದರು.

ಪಂಚಾಕ್ಷರಿ ಗವಾಯಿಗಳಿಗೂ ಸಂಗೀತ ಶಿಕ್ಷಣ ನೀಡಿ ಗುರುಗಳಾಗಿದ್ದು ಸ್ಮರಣೀಯ. ವಚನ ಪಿತಾಮಹ ಫ.ಗು. ಹಳಕಟ್ಟಿಯವರೊಂದಿಗೆ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸುವಲ್ಲಿ ಹಾನಗಲ್ ಕುಮಾರಸ್ವಾಮಿಗಳ ಪಾತ್ರ ಮಹತ್ತರವಾದುದು. ಶರಣ ಸಂಸ್ಕೃತಿ, ಸಾಹಿತ್ಯ, ಸಂಗೀತ, ಕೃಷಿ, ಯೋಗ-ಶಿವಯೋಗ, ವಿಭೂತಿ ತಯಾರಿಕೆ, ಗೋ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಸಾಧನೆ ಅನನ್ಯ ಮತ್ತು ಅನುಪಮ ಎಂದರು.

ಡಾ. ರಾಜಶೇಖರ ದಾನರಡ್ಡಿ ಉಪನ್ಯಾಸಕರಾಗಿ ಮಾತನಾಡಿ, ಪುಟ್ಟರಾಜ ಕವಿ ಗವಾಯಿಗಳು ಸಂಗೀತ ಕ್ಷೇತ್ರದ ದಿಗ್ಗಜರು, ತ್ರಿಭಾಷಾ ಕವಿಗಳು, ಬರಹಗಾರರು, ಅನುಪಮ ಅಧ್ಯಾತ್ಮ ಜೀವಿ, ಸಮಾಜ ಸುಧಾರಕರಾಗಿದ್ದರು. ಪುಟ್ಟರಾಜ ಕವಿ ಗವಾಯಿಗಳು ಅಂಧ ಅನಾಥ ಮಕ್ಕಳಿಗೆ ಉಚಿತವಾಗಿ ಸಂಗೀತ ಮತ್ತು ಅನ್ನ ಆಶ್ರಯ ಕಲ್ಪಿಸಿ ಅವರ ಬಾಳನ್ನು ಬೆಳಗಿದ್ದಾರೆ ಎಂದು ಹೇಳಿದರು.

ಈ ವೇಳೆ ಸಮ್ಮುಖವನ್ನು ವೀರೇಶ್ವರ ಪುಣ್ಯಾಶ್ರಮ ಪೀಠಾಧಿಪತಿ ಶ್ರೀ ಡಾ. ಕಲ್ಲಯ್ಯಜ್ಜನವರು ವಹಿಸಿದ್ದರು.

ಸವಿತಾ ಕುಪ್ಪಸದ (ಗುಡ್ಡದ) ಅವರು ವಚನ ಸಂಗೀತ ಹಾಡಿದರು. ಗುರುನಾಥ ಸುತಾರ, ಅಶೋಕ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಮನೋಜ ಅಶೋಕ ಸುತಾರ, ವಚನ ಚಿಂತನೆಯನ್ನು ನಿಖಿತಾ ಅಶೋಕ ಸುತಾರ ಅವರು ನೆರವೇರಿಸಿದರು. ಶಿವಾನುಭವದ ದಾಸೋಹ ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದ ಚನ್ನಬಸಪ್ಪ ಹಾಗೂ ವೀರೇಶ ನಂದಿಹಾಳ ಹಾಗೂ ಪರಿವಾರ ಗಜೇಂದ್ರಗಡ ಅವರನ್ನು ಪೂಜ್ಯರು ಸನ್ಮಾನಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹ ಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರೂಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಇದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.