ಸಾರಾಂಶ
ಭಕ್ತರ ಸಂಭ್ರಮವೇ ನನಗೆ ಸಂತೋಷ. ನನಗೆ ಯಾವ ಜನ್ಮದಿನ ಆಚರಿಸಿಕೊಳ್ಳುವ ಖಯಾಲಿ ಇಲ್ಲ. ಬರುವ ವರ್ಷದಿಂದ ನನ್ನ ಜನ್ಮದಿನವನ್ನು ಅಕ್ಷರ ಜಾತ್ರೆ ಎಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ: ಡಾ.ಅಭಿನವ ಚನ್ನಮಲ್ಲ ಶಿವಯೋಗಿಗಳು
ಕನ್ನಡಪ್ರಭ ವಾರ್ತೆ ಚವಡಾಪುರ
ಬರದ ನಾಡಲ್ಲಿ ಅನ್ನ, ಅರಿವು, ಅಕ್ಷರಗಳನ್ನು ಬಡ ಮಕ್ಕಳಿಗೆ, ಸಕಲ ಭಕ್ತರಿಗೆ ಕರುಣಿಸುವ ಮೂಲಕ ತ್ರಿವಿಧ ದಾಸೋಹಿಗಳಾಗಿ ಭಕ್ತರ ಹೃದಯದಲ್ಲಿ ಮನೆ ಮಾಡಿರುವ ಬಡದಾಳ ಮಠದ ಡಾ.ಅಭಿನವ ಚನ್ನಮಲ್ಲ ಶಿವಯೋಗಿಗಳ ನಿಸ್ವಾರ್ಥ ಕಾರ್ಯ ಶ್ಲಾಘನೀಯವಾದುದ್ದು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಹೇಳಿದರು.ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಬಡದಾಳ ಗ್ರಾಮದ ಚನ್ನಮಲ್ಲೇಶ್ವರ ಮಠದಲ್ಲಿ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯ 17ನೇ ವಾರ್ಷಿಕೋತ್ಸವ ಹಾಗೂ ಮಠದ ಡಾ. ಅಭಿನವ ಚನ್ನಮಲ್ಲ ಶಿವಯೋಗಿಗಳ 61ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಮಠದ ಪೂಜ್ಯರಾಗಿ ಬಂದ ಭಕ್ತರಿಗೆ ಆಶೀರ್ವಾದ ಮಾಡಿದರೆ ಸಾಲದು, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ 17 ವರ್ಷಗಳ ಹಿಂದೆ ಪೂಜ್ಯರು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಲು ಆರಂಭಿಸಿದ್ದರು. ಇಂದು ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಇನ್ನೂ ದೊಡ್ಡದಾಗಿ ಬೆಳೆವಣಿಗೆಯಾಗಬೇಕು. ಪೂರ್ವ ಪ್ರಾಥಮಿಕ ದಿಂದ ಪಿಯುವ ವರೆಗಿನ ಶಾಲಾ ಕಾಲೇಜು ಬರುವ ದಿನಗಳಲ್ಲಿ ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಡಿಪ್ಲೋಮಾ ದಂತ ಪದವಿಗಳು ಪ್ರಾರಂಭಗೊಂಡು ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂದ ಅವರು ಪೂಜ್ಯರ ಜನ್ಮದಿನ ನಮ್ಮ ಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲಿ. ಪದವಿ, ಮೆಡಿಕಲ್, ಪ್ಯಾರಾ ಮೆಡಿಕ್ ಕಾಲೇಜುಗಳು ಕೂಡ ಶ್ರೀಮಠದ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಆರಂಭವಾಗುವ ದಿನಗಳು ಬರಲಿ ಎಂದು ಶುಭ ಹಾರೈಸಿದರು.ಅಫಜಲ್ಪುರ ಠಾಣಾ ಪಿಎಸ್‌ಐ ಮಹಿಬೂಬ ಅಲಿ ಮಾತನಾಡಿ, ಬಡದಾಳ ಮಠ ಹಾಗೂ ಪೂಜ್ಯರ ಭಕ್ತ ಬಳಗ ಕಂಡು ನಾನು ನಿಬ್ಬೆರಗಾಗಿದ್ದೇನೆ. ಬಡದಾಳ ಶ್ರೀಗಳು ನಮ್ಮ ಠಾಣಾ ವ್ಯಾಪ್ತಿಯಲ್ಲಿ ಇರುವುದರಿಂದ ನಮಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನಷ್ಟು ಅನುಕೂಲ ಆಗಿದೆ. ಶ್ರೀಗಳ ಆಶಿರ್ವಾದ ಎಲ್ಲರ ಮೇಲಿರಲಿ ಎಂದರು.
ಡಾ.ಅಭಿನವ ಚನ್ನಮಲ್ಲ ಶಿವಯೋಗಿಗಳು ಮಾತನಾಡಿ, ಭಕ್ತರ ಸಂಭ್ರಮವೇ ನನಗೆ ಸಂತೋಷ. ನನಗೆ ಯಾವ ಜನ್ಮದಿನ ಆಚರಿಸಿಕೊಳ್ಳುವ ಖಯಾಲಿ ಇಲ್ಲ. ಬರುವ ವರ್ಷದಿಂದ ನನ್ನ ಜನ್ಮದಿನವನ್ನು ಅಕ್ಷರ ಜಾತ್ರೆ ಎಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಜನ್ಮದಿನದ ಪ್ರಯುಕ್ತ ಯಾರು ಕೇಕು, ಹಾರತುರಾಯಿ ತರುವುದು ಬೇಡ. ಅದೇ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡೋಣ ಎಂದ ಅವರು, ವಿದ್ಯೆ ಬಂದು ವಿನಯ ಹೋದರೆ ಭವಿಷ್ಯ ಬಹಳ ಕೆಟ್ಟದಾಗಿರುತ್ತದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಮೌಲ್ಯಾಧಾರಿತ ಬೋಧನೆ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಶಿಕ್ಷಕರಿಗೆ ತನುಮನ ಸಮರ್ಪಣೆ ಮಾಡಿ ಮೌಲ್ಯಾಧಾರಿತ ಶಿಕ್ಷಣ ನೀಡುವಂತೆ ನಾನು ಸದಾ ಸಲಹೆ ನೀಡುತ್ತೇನೆ ಎಂದರು.ಚಿಂಚೋಳಿ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ನಿಲೂರಿನ ಶರಣಯ್ಯ ಸ್ವಾಮಿಗಳು ಮಾತನಾಡಿದರು. ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಉದ್ಯಮಿ ಎಸ್.ಬಿ ಪಾಟೀಲ್ ಪುಣೆ, ಈರಣ್ಣಗೌಡ ನಾವದಗಿ, ರೇವಣಸಿದ್ದ ನಂದೂರ, ಶಿವು ಪದಕಿ, ಖಾಜಪ್ಪ ಜಮಾದಾರ, ಶ್ರೀಕಾಂತ ನಿಂಬಾಳ, ಮಲ್ಲಿನಾಥ ಅತನೂರೆ, ಪರಮೇಶ್ವರ ಶಿರೂರ, ಸೂರ್ಯಕಾಂತ ಮಾಡ್ಯಾಳ ಸೇರಿದಂತೆ ಅನೇಕರು ಇದ್ದರು.