ಸೂರ್ಯನ ಚಿನ್ನದ ಕಿರಣವಾಯ್ತು ಕಾದ ಕಬ್ಬಿಣ!

| Published : Mar 11 2024, 01:19 AM IST

ಸಾರಾಂಶ

ಮಳೆ ಮತ್ತು ಚಳಿಗಾಲದಲ್ಲಿ ಸದಾ ತಂಪಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಬಿಸಿಲಿನ ಆರ್ಭಟ. ಬಯಲು ಸೀಮೆ ಬಿಸಿಲನ್ನು ನಾಚಿಸುವಂತೆ ಮಲೆನಾಡಿನಲ್ಲಿ ಬಿಸಿಲಿನ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು, ರಣಬಿಸಿಲಿಗೆ ಜನರು ಬಸವಳಿಯುತ್ತಿದ್ದಾರೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್‌ ಪ್ರಾರಂಭದಲ್ಲೆ ಬಿಸಿಲಿನ ಝಳ ವಿಪರೀತವಾಗಿದೆ. ಅಧಿಕ ಬಿಸಿಲಿನಿಂದ ರಕ್ಷ ಣೆ ಪಡೆಯಲು ಜನರು ಮರಗಳ ಕೆಳಗೆ, ಗಾಳಿ ಬೀಸುವ ಕೆಲ ವಸ್ತುಗಳಿಗೆ ಮೊರೆಹೋಗಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಗ್ರಾಹಕರಿಲ್ಲ, ಗಾಂಧಿಬಜಾರ್‌, ಬಿಗ್‌ ಬಜಾರ್‌ನಂತಹ ಮಾರುಕಟ್ಟೆಗಳ ವ್ಯಾಪಾರವೂ ಡಲ್‌ ಆಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಳೆ ಮತ್ತು ಚಳಿಗಾಲದಲ್ಲಿ ಸದಾ ತಂಪಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಬಿಸಿಲಿನ ಆರ್ಭಟ. ಬಯಲು ಸೀಮೆ ಬಿಸಿಲನ್ನು ನಾಚಿಸುವಂತೆ ಮಲೆನಾಡಿನಲ್ಲಿ ಬಿಸಿಲಿನ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು, ರಣಬಿಸಿಲಿಗೆ ಜನರು ಬಸವಳಿಯುತ್ತಿದ್ದಾರೆ.

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್‌ ಪ್ರಾರಂಭದಲ್ಲೆ ಬಿಸಿಲಿನ ಝಳ ವಿಫರೀತವಾಗಿದೆ. ಅಧಿಕ ಬಿಸಿಲಿನಿಂದ ರಕ್ಷ ಣೆ ಪಡೆಯಲು ಜನರು ಮರಗಳ ಕೆಳಗೆ, ಗಾಳಿ ಬೀಸುವ ಕೆಲ ವಸ್ತುಗಳಿಗೆ ಮೊರೆಹೋಗಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಗ್ರಾಹಕರಿಲ್ಲ, ಇತ್ತ ಗಾಂಧಿಬಜಾರ್‌, ಬಿಗ್‌ ಬಜಾರ್‌ನಂತಹ ಮಾರುಕಟ್ಟೆಗಳ ವ್ಯಾಪಾರವೂ ಡಲ್‌ ಆಗಿದೆ.

ಜಿಲ್ಲೆಯಲ್ಲಿ ಇತ್ತೀಚೆಗೆ 35ರಿಂದ 37 ಡಿಗ್ರಿ ಸೆಲ್ಸಿಯಸ್‌ಗೂ ತಾಪಮಾನ ಏರಿಕೆ ಆಗಿರುವುದು ಕಂಡುಬಂದಿದೆ. ನಾಲ್ಕೈದು ದಿನಗಳಿಂದ ಸೂರ್ಯನ ಬಿಸಿಲು ಜೋರಾಗಿದ್ದು, 34ರ ಗಡಿಯಲ್ಲಿದ್ದ ತಾಪಮಾನ, ಭಾನುವಾರ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಇನ್ನು ಎರಡ್ಮೂರು ದಿನದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆ ಇದೆ. ಸದ್ಯ ಬಿಸಿಲ ಹೊಡೆತಕ್ಕೆ ಜನ ಕಂಗಾಲಾಗಿದ್ದಾರೆ. ಕೂಲಿ ಕಾರ್ಮಿಕರು, ರೈತರು, ನಿತ್ಯ ನಾನಾ ಕಡೆ ಹೋಗಿ ಕೆಲಸ ಮಾಡುವ ನೌಕರರು ಈ ಬಿಸಿಲ ಧಗೆ ತಾಳಲಾರದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ತಾಲೂಕುವಾರು ಉಷ್ಣಾಂಶ ಪ್ರಮಾಣ:

ಮಾರ್ಚ್‌ನಲ್ಲೇ ಉಷ್ಣಾಂಶ ಪ್ರಮಾಣ ಹೆಚ್ಚಾಗಿದ್ದು, ಶಿವಮೊಗ್ಗ ನಗರದಲ್ಲಿ ಗರಿಷ್ಠ 37 ಡಿಗ್ರಿ, ಭದ್ರಾವತಿಯಲ್ಲಿ 36, ಶಿಕಾರಿಪುರದಲ್ಲಿ 36, ತೀರ್ಥಹಳ್ಳಿಯಲ್ಲಿ 34, ಸಾಗರದಲ್ಲಿ 34, ಸೊರಬದಲ್ಲಿ 35, ಹೊಸನಗರದಲ್ಲಿ 34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಪ್ರಮಾಣ ಕಂಡುಬಂದಿದೆ. ತಾಲೂಕು ಉಷ್ಣಾಂಶದ ಪ್ರಮಾಣದಲ್ಲಿ ಶಿವಮೊಗ್ಗ ನಗರದಲ್ಲೇ ಹೆಚ್ಚು ಉಷ್ಣಾಂಶ ಕಂಡುಬಂದಿದ್ದು, ಇನ್ನೂ ಹೆಚ್ಚಾಗುವ ಸೂಚನೆಗಳು ಕಂಡುಬಂದಿವೆ.

ಉಷ್ಣ ಹವೆ:

ಬಿಸಿಲ ಜತೆ ಗಾಳಿಯೂ ಬಿಸಿಯಾಗಿದೆ. ಗಾಳಿಯಲ್ಲಿನ ತೇವಾಂಶದ ಪ್ರಮಾಣ ಕ್ಷೀಣಿಸುತ್ತಿದ್ದು, ಬೆಳಗ್ಗೆ 10 ಗಂಟೆಯ ಬಿಸಿಲೇ ತಡೆಯುವುದಕ್ಕೆ ಆಗುವುದಿಲ್ಲ, ಇನ್ನು ಮಧ್ಯಾಹ್ನ ಉರಿಬಿಸಿಲು ಇರುತ್ತದೆ. ಈ ಸಮಯದಲ್ಲಿ ಆಚೆ ಹೋಗಲು ತುಂಬ ಕಷ್ಟವಾಗುತ್ತಿದೆ. ಮಧ್ಯಾಹ್ನ ವೇಳೆ ಹೊರಗಡೆ ಹೆಚ್ಚಿನ ಸಂಚಾರ ಇಲ್ಲದಂತಾಗಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಕೊಡೆಗಳ ಮೊರೆ ಹೋಗಿದ್ದಾರೆ. ಮಹಿಳೆಯರು ಮುಖ, ಕೈ, ತೋಳು ತುಂಬ ಬಟ್ಟೆಯ ಮಾಸ್ಕ್‌ ಧರಿಸಲು ಆರಂಭಿಸಿದ್ದಾರೆ.

ಮಧ್ಯಾಹ್ನ ನಂತರ ಮರದ ನೆರಳು ಇತರೇ ನೆರಳು ಇರುವ ಕಡೆ ಹೋಗಿ ನಿಂತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಓಡಾಡುವ ಜಾನವಾರುಗಳು ಸಹ ಬಿಸಿಲಿನ ತಾಪಕ್ಕೆ ರಸ್ತೆಯ ವಿಭಜಕಗಳ ಮಧ್ಯೆ ಇರುವ ಗಿಡ- ಮರಗಳ ನೆರಳಿನಲ್ಲಿ ನಿಂತುಕೊಂಡು ವಿಶ್ರಾಂತಿ ಪಡೆಯುವಂತಾಗಿದೆ.

ಬಿಸಿಲು ಹೆಚ್ಚಾಗಿ ಮನೆಯಲ್ಲಿ ಸೆಕೆ ತಾಳಲಾರದೇ ಸೀಲಿಂಗ್‌ ಫ್ಯಾನ್‌, ಟೇಬಲ್‌ ಫ್ಯಾನ್‌, ಗೋಡೆಗೆ ನೇತಾಡುವ ಫ್ಯಾನ್‌, ಏರ್‌ ಕೂಲರ್‌ ಮತ್ತು ಏರ್‌ ಕಂಡೀಷನ್‌ಗೂ ಜನ ಮೊರೆಹೋಗಿದ್ದಾರೆ. ಸುಡು ಬಿಸಿಲಿನ ಪರಿಣಾಮ ನಗರದಲ್ಲಿ ಮಧ್ಯಾಹ್ನದ ವೇಳೆಗೆ ಜನರು ಬೀದಿಗೆ ಇಳಿಯಲು ಭಯಪಡುತ್ತಿದ್ದಾರೆ. ನಗರದ ಹೆಚ್ಚಿನ ರಸ್ತೆಗಳು ಜನರಿಲ್ಲದೇ ಭಣಗುಡುತ್ತಿವೆ.

ತಂಪುಪಾನೀಯಗಳಿಗೆ ಡಿಮ್ಯಾಂಡ್‌:

ಬಿಸಿಲುನ ಝಳ, ಸೆಕೆಯಿಂದ ತಪ್ಪಿಸಿಕೊಳ್ಳಲು ಜನರು ತಂಪು ಪಾನೀಯಗಳಿಗೆ ಮೊರೆಹೋಗಿದ್ದು, ನಗರದ ಹಾದಿ, ಬೀದಿಗಳಲ್ಲಿ ಕಲ್ಲಂಗಡಿ, ಪಪ್ಪಾಯಿ ಸೇರಿದಂತೆ ಇತರೆ ಹಣ್ಣುಗಳಿಗೆ ಡಿಮ್ಯಾಂಡ್‌, ಕಬ್ಬಿನ ಜ್ಯೂಸ್‌ ಅಂಗಡಿಗಳು, ಎಳನೀರು, ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳ ವ್ಯಾಪಾರವೂ ಭರ್ಜರಿಯಾಗಿದೆ.

- - -

ಕೋಟ್ಸ್‌ ಬೆಳಗ್ಗೆ 10 ಗಂಟೆಯ ಬಿಸಿಲಿನ ಚುರುಕು ತಡೆಯುವುದಕ್ಕೆ ಆಗುತ್ತಿಲ್ಲ, ಮಧ್ಯಾಹ್ನ ಉರಿಬಿಸಿಲು ಇರುತ್ತದೆ. ಈ ಸಮಯದಲ್ಲಿ ಆಚೆ ಹೋಗಲು ತುಂಬ ಕಷ್ಟವಾಗುತ್ತಿದೆ. ಸ್ವಲ್ಪ ದೂರ ಹೋಗಿಬರುವಷ್ಟರಲ್ಲಿ ಸುಸ್ತಾಗಿ ಹೋಗುತ್ತದೆ

- ಮಧು, ಮಲವಗೊಪ್ಪ ನಿವಾಸಿ. ಶಿವಮೊಗ್ಗದಲ್ಲಿ ಬಿರು ಬೆಸಿಗೆಯಲ್ಲೂ ಇಷ್ಟೊಂದು ಬಿಸಿಲು ಇರುತ್ತಿರಲಿಲ್ಲ. ಇತ್ತೀಚೆಗೆ ಬಯಲುಸೀಮೆ ಬಿಸಿಲನ್ನು ನಾಚಿಸುವಂತೆ ಮಲೆನಾಡಿನಲ್ಲಿ ಬಿಸಿಲಿನ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ಶಿವಮೊಗ್ಗದಲ್ಲೂ ಬಿಸಿಲ ಧಗೆ ಹೆಚ್ಚಾಗುತ್ತಿದೆ. ಬೆಳಗ್ಗಿನ ವೇಳೆಯೇ ವಿಪರೀತ ಬಿಸಿಲು ಇರುತ್ತದೆ. ಮಧ್ಯಾಹ್ನ ಹೊತ್ತಿನ ಬಿಸಿಲು ಬರೆ ಹಾಕುವಂತಿರುತ್ತದೆ

- ಶ್ರೀನಿವಾಸ್‌, ವಿದ್ಯಾನಗರ ನಿವಾಸಿ

- - -

-10ಎಸ್‌ಎಂಜಿಕೆಪಿ01:

ಶಿವಮೊಗ್ಗ ನಗರದಲ್ಲಿ ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಕೊಡೆಯ ಮೊರೆ ಹೋದ ಮಹಿಳೆಯರು. -10ಎಸ್‌ಎಂಜಿಕೆಪಿ02:

ಶಿವಮೊಗ್ಗ ನಗರ ಬಿ,ಎಚ್‌. ರಸ್ತೆಯಲ್ಲಿ ಬಿಸಿಲಿನಲ್ಲೇ ಗ್ರಾಹಕರಿಗಾಗಿ ಕಾಯುತ್ತಿರುವ ಬೀದಿಬದಿ ವ್ಯಾಪಾರಿಗಳು.