ಹುಬ್ಬಳ್ಳಿ:

ಇಲ್ಲಿಯ ಐಬಿಎಂಆರ್​ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ನವೀನತೆ, ಸ್ಟಾರ್ಟ್ಅ​ಪ್​ ಚಿಂತನೆ ಹಾಗೂ ಉದ್ಯಮಶೀಲತೆ ಬೆಳೆಸುವ ಸಲುವಾಗಿ ನಗರದ ಡೆನಿಸನ್ಸ್​ ಹೋಟೆಲ್​ನಲ್ಲಿ ಏರ್ಪಡಿಸಿದ್ದ ಮೆಗಾ ಫಿನ್ನೋವೇಟ್​ ಶೃಂಗಸಭೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಅಂತಾರಾಷ್ಟ್ರೀಯ ಮಟ್ಟದ ಫಿನ್​ಟೆಕ್​ ಮತ್ತು ನಾವಿನ್ಯತೆ ಸಮಿಟ್‌ ಇದಾಗಿದ್ದು, ವಿವಿಧೆಡೆಯಿಂದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ವಿಕಸಿತ ಭಾರತ ಸಂಕಲ್ಪದೊಂದಿಗೆ ಆಯೋಜಿಸಿದ್ದ ಸಮ್ಮೇಳನಕ್ಕೆ ಅನೇಕ ವಿದ್ಯಾರ್ಥಿಗಳು, ವಾಣಿಜ್ಯೋದ್ಯಮಿಗಳು, ಉದ್ಯಮಶೀಲರು ಆಗಮಿಸಿದ್ದಾರೆ. ತಜ್ಞರು, ಉದ್ಯಮದಲ್ಲಿ ಯಶಸ್ಸು ಕಂಡವರು ತಮ್ಮದೇ ಆದ ಅನುಭವ ಹಂಚಿಕೊಂಡರು.

ತಂತ್ರಜ್ಞಾನ ಭರಿತ ಭಾರತ:

ಫಿನ್ನೋವೇಟ್​ ಶೃಂಗಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಬಿಎಂಆರ್​ ಚೇರ್‌ಮನ್​ ವಿನಯಚಂದ್ರ ಮಹೇಂದ್ರಕರ್​, ದೇಶವು ಬರಲಿರುವ ದಿನಗಳಲ್ಲಿ ತಂತ್ರಜ್ಞಾನ ಭರಿತ ಭಾರತವಾಗಲಿದೆ. ಶಿಕ್ಷಣ, ಆರ್ಥಿಕ, ಸಾಮಾಜಿಕ ರಂಗಗಳಲ್ಲಿ ತಂತ್ರಜ್ಞಾನವು ಸಂಪತ್ಭರಿತವಾಗಲಿದೆ. ಇದು ಪ್ರಪಂಚದಲ್ಲಿಯೇ ಬಲಿಷ್ಠ ತಂತ್ರಜ್ಞಾನ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಎಂದರು.

ಶೃಂಗಸಭೆಯಲ್ಲಿ 147 ಸ್ಟಾರ್ಟಅಪ್​ಗಳು, 500ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕನಕದಾಸ ಶಿಕ್ಷಣ ಸಮಿತಿಯ ಚೇರ್‌ಮನ್​ ರವೀಂದ್ರನಾಥ ದಂಡಿನ, ಐಬಿಎಂಆರ್​ ಸಂಸ್ಥೆಯ ಟ್ರಸ್ಟಿ ಸುಮಾ ಮಹೇಂದ್ರಕರ, ಕರ್ನಾಟಕ ರಾಜ್ಯ ಕಾನೂನು ವಿವಿ ಸಿಂಡಿಕೇಟ್​ ಸದಸ್ಯ ಡಾ. ಎಚ್​.ವಿ. ಬೆಳಗಲಿ, ಐಬಿಎಂಆರ್​ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ ಸಂಜನಾ ಮಹೇಂದ್ರಕರ, ಎಸ್​ಟಿಪಿಐ ನಿರ್ದೇಶಕ ಶಶಿಕುಮಾರ, ಪವನ ಜೈನ್​, ಡಾ. ವೆಂಕಟೇಶ ಅರಕೇರಿ, ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ಕೆಡಿಇಎಂನ ವೆಂಕಟೇಶ ದೇಶಪಾಂಡೆ ಸೇರಿದಂತೆ ಇತರರು ಪ್ಯಾನಲ್​ ಚರ್ಚೆಯಲ್ಲಿ ಪಾಲ್ಗೊಂಡರು.ಅಭಯ ಕಬಾಡಿ, ಶಶಿಕರ ಕೃಷಿ, ರಶ್ಮಿತಾ ಕಲ್ಯಾಣ, ಹಲವು ಸಂಪನ್ಮೂಲ ವ್ಯಕ್ತಿಗಳು ಅನುಭವ ಹಂಚಿಕೊಂಡರು. ಸಿಇಒ ಇಗ್ನೇಶ್​ ಸಕ್ರಿ ಸ್ವಾಗತಿಸಿದರು. ರೇಖಾ ಮಹೇಂದ್ರಕರ ಪ್ರಾಸ್ತಾವಿಕ ಮಾತನಾಡಿದರು. ರೋಹನಕುಮಾರ್​ ಕುಲಕರ್ಣಿ ಶೃಂಗಸಭೆ ಕುರಿತು ತಿಳಿಸಿದರು. ನಜೀಮ್​ ಮಿಶ್ರಿಕೋಟಿ ವಂದಿಸಿದರು.