ಜನಾಂದೋಲನ ಸಮಾವೇಶದ ಪೂರ್ವಭಾವಿ ಸಭೆ

| Published : Aug 06 2024, 12:37 AM IST

ಸಾರಾಂಶ

ಕಾನೂನಾತ್ಮಕವಾಗಿ ಜಮೀನು ಪಡೆದಿದ್ದರೂ ಬಿಜೆಪಿ- ಜೆಡಿಎಸ್ ನವರು ದ್ವೇಷದ ರಾಜಕಾರಣಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಎಂಡಿಎ) ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿದೆ. ಅವರ ನೈತಿಕತೆ, ಕಳಂಕ ರಹಿತ ವ್ಯಕ್ತಿತ್ವ ಅಳಿಸಲು ಬಿಜೆಪಿ ನಾಯಕರು ರಾಜ್ಯಪಾಲರನ್ನು ಬಳಸಿಕೊಂಡಿದ್ದಾರೆ.ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಬರೆ ಹಾಕಲು ಮುಂದಾಗಿದ್ದಾರೆ. ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವುದು ಅವಸರದ ನಡೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಟೀಕಿಸಿದರು.

ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಜನಾಂದೋಲನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಸವಾಲೊಡ್ಡುವ ಕಳಂಕರಹಿತ ನಾಯಕರಾದ ಸಿದ್ದರಾಮಯ್ಯ ಅವರನ್ನು ಹಣಿಯಲು ಬಿಜೆಪಿ ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರ ದನಿ ಅಡಗಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.

ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ

ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಒಪ್ಪಿಗೆ ಕೊಡಿಸುವಂತೆ ಹೇಳಿರುವ ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಚಂದ್ರಶೇಖರ್ ಅವರು, ಅವರೇನು ಪ್ರಧಾನ ಮಂತ್ರಿಯೇ? ಮಂಡ್ಯದ ಚುನಾವಣಾ ಪ್ರಚಾರದಲ್ಲಿ ಗೆದ್ದ 24 ಗಂಟೆಯೊಳಗೆ ಮೇಕೆದಾಟು ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದನ್ನು ಕುಮಾರಸ್ವಾಮಿ ಅವರು ಮರೆತಿರುವಂತಿದೆ. ಅಧಿವೇಶನದಲ್ಲಿ ಪ್ರಶ್ನೆ ಮಾಡದ ಅವರು ಯಾವ ರಾಜಕಾರಣಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಕಾನೂನಾತ್ಮಕವಾಗಿ ಜಮೀನು ಪಡೆದಿದ್ದರೂ ಬಿಜೆಪಿ- ಜೆಡಿಎಸ್ ನವರು ದ್ವೇಷದ ರಾಜಕಾರಣಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಚಾರಿತ್ರ್ಯ ವಧೆ ಮಾಡಲು ಪಾದಯಾತ್ರೆ ಮಾಡುತ್ತಿದ್ದಾರೆ. ಆ.9ರ ಸಭೆಯಲ್ಲಿ ಕಾಂಗ್ರೆಸ್ ಎಲ್ಲಾ ಶಾಸಕರು ಪಾಲ್ಗೊಳ್ಳಬೇಕು. ನಗರ ಪ್ರದೇಶದಿಂದ ಹೆಚ್ಚಿನ ಜನರು ಬರಬೇಕು ಎಂದು ಕೋರಿದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಮೈಸೂರಿನ ಜನಾಂದೋಲನ ಸಮಾವೇಶದಲ್ಲಿ 2 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಜೆಡಿಎಸ್, ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಬೇಕು. ಸಿದ್ದರಾಮಯ್ಯ ಅವರಿಗೂ ಎಂಡಿಎ ಹಗರಣಕ್ಕೂ ಸಂಬಂಧ ಇಲ್ಲ. ಕೋರ್ಟ್ ಆದೇಶದಂತೆ ಜಮೀನಿಗೆ ಬದಲಿ ನಿವೇಶನ ಕೊಟ್ಟಿದ್ದಾರೆ. ಆದರೆ, ಬಿಜೆಪಿ- ಜೆಡಿಎಸ್ ನಾಯಕರು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದು, ಜನರಿಗೆ ಸತ್ಯ ಹೇಳುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದಾಖಲೆ ಇಲ್ಲದೇ ಆರೋಪ ಮಾಡುತ್ತಾರೆ. ಲೋಕಸಭೆ ಅಧಿವೇಶನ ಮುಗಿದ ಬಳಿಕ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಬಹುದು. ಕಾನೂನು ಹೋರಾಟ ಮಾಡೋಣಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಭಾರತಿಶಂಕರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಮೇಯರ್ ಗಳಾದ ಬಿ.ಎಲ್. ಭೈರಪ್ಪ, ಪುರುಷೋತ್ತಮ್, ನಾರಾಯಣ, ಪುಷ್ಪಾಲತಾ ಚಿಕ್ಕಣ್ಣ, ಬಿ.ಕೆ. ಪ್ರಕಾಶ್, ಮೋದಾಮಣಿ, ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಎಂ. ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮೊದಲಾದವರು ಇದ್ದರು.

----

ಕೋಟ್...

ಭ್ರಷ್ಟಾಚಾರಿಗಳೇ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದ ಪ್ರತಿಯಾಗಿ ಆ.9 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಜನಾಂದೋಲನ ಸಮಾವೇಶ ಯಶಸ್ವಿಗೊಳಿಸಬೇಕು. ಇದು ಕಾಂಗ್ರೆಸ್ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯೂ ಆಗಿದೆ. ಬಿಜೆಪಿ- ಜೆಡಿಎಸ್ ವಿರುದ್ಧದ ಹೋರಾಟ ಧರ್ಮಯುದ್ಧವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಸೈನಿಕರಾಗಿ ಹೋರಾಟ ಮಾಡಬೇಕಿದೆ. ಮೈಸೂರು ಸಭೆಗೆ ಕೊಡಗು, ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು ಬರಲಿದ್ದಾರೆ.

- ಜಿ.ಸಿ. ಚಂದ್ರಶೇಖರ್, ರಾಜ್ಯಸಭಾ ಸದಸ್ಯರು